ಮೋದಿ ನೀಡಿದಷ್ಟು ಅನುದಾನ ಬೇರಾವ ಸರ್ಕಾರ ನೀಡಿಲ್ಲ: ಚರ್ಚೆಗೆ ಸಿ.ಟಿ.ರವಿ ಆಹ್ವಾನ

CT Ravi
Published on

ಮೈಸೂರು: ದೇಶದ ಇಷ್ಟು ವರ್ಷಗಳ ಇತಿಹಾಸದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದಷ್ಟು ಅನುದಾನವನ್ನು ಯಾವ ಸರ್ಕಾರವೂ ನೀಡಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು.
ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಷ್ಟು, ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ತೆರಿಗೆ ಪಾಲು, ಗ್ರ್ಯಾಂಟ್ ಮೂಲಕ ಎಷ್ಟು ಅನುದಾನ ನೀಡಿದೆ ಎಂಬುದರ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಸಿದ್ದರಾಮಯ್ಯ ಅವರು ಸಿದ್ದರಿದ್ದಾರೆಯೇ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ನಿಮ್ಮ ದೃಷ್ಟಿಯಲ್ಲಿ ಹೆಚ್ಚು ಅನುದಾನ ಕೊಟ್ಟವರು, ತೆರಿಗೆ ಪಾಲು ನೀಡಿದವರು ಅನ್ಯಾಯ ಮಾಡಿದ್ದಾರೆ ಎಂಬುದಾದರೆ ಮೊದಲು ನಿಮ್ಮ ದೃಷ್ಟಿದೋಷ ಸರಿಪಡಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಅವರೇ ಉತ್ತರ ಕೊಟ್ಟಿದ್ದಾರೆ. ಆದರೆ ಅವರು ಚರ್ಚೆ ಮಾಡದೆ ಏಕಪಾತ್ರಾಭಿನಯ ಮಾಡಿದರು. ನಾವು ಅನುದಾನ ಕೊಟ್ಟಿದ್ದು ಸುಳ್ಳಾದರೆ ಚಾಮುಂಡೇಶ್ವರಿ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದೆ. ಯಾರೂ ಸ್ವೀಕರಿಸಲಿಲ್ಲ. ಸಂಸತ್ತಿನಲ್ಲೇ ಸ್ಪಷ್ಟನೆ ನೀಡಿದರೂ ಕೋರ್ಟ್ ಮೊರೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೇರಳ ಹಾದಿಯಲ್ಲಿ ಸಾಗುತ್ತಿದ್ದು, ಅವರಂತೆ ದಿವಾಳಿಯಾಗುತ್ತಾರೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net