

ಮೈಸೂರು: ಸಕಲೇಶಪುರದ ಬಳಿ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅಂಬಾರಿ ಆನೆ ಅರ್ಜುನನ ಸಮಾಧಿ ನಿರ್ಮಿಸುವ ನೆಪದಲ್ಲಿ ಎಲ್ಲರನ್ನೂ ವಂಚಿಸುತ್ತಿರುವುದಾಗಿ ನನ್ನ ಮೇಲೆ ಕೆಲವರು ಆರೋಪ ಮಾಡಿರುವುದು ಸತ್ಯಕ್ಕೆ ದೂರ ಎಂದು ಎಚ್.ಡಿ.ಕೋಟೆಯ ಎಚ್.ಎನ್.ನವೀನ್ ಸ್ಪಷ್ಟಪಡಿಸಿದರು.
ನಾನು ಚಿಕ್ಕಂದಿನಿಂದಲೂ ಅರ್ಜುನ ಆನೆ ಜತೆಗೆ ಬಾಂಧವ್ಯ ಹೊಂದಿದ್ದೆ. ದೂರದ ಪ್ರದೇಶದಲ್ಲಿ ಅದು ಮೃತಪಟ್ಟಿದ್ದ ಕಾರಣ ಜನಮನದಿಂದ ಮರೆಯಾಗುತ್ತದೆ ಎಂಬ ಕಾರಣಕ್ಕಾಗಿ ಅರ್ಜುನನ ಹೆಸರಿನಲ್ಲಿ ಒಂದು ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದೆ. ಅದರಲ್ಲಿ ಇಂತಹುದೇ ಆಸಕ್ತಿಯ ಸುಮಾರು 900 ಜನರು ಸದಸ್ಯರಾದರು ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರೂಪ್‌ನಲ್ಲಿ ಅರ್ಜುನನ ಬಗ್ಗೆ ಚರ್ಚೆ ನಡೆಯುವ ವೇಳೆ ನೀವೇ ಏಕೆ ಮುಂದಾಳತ್ವ ವಹಿಸಿ ಸಮಾಧಿ ನಿರ್ಮಿಸಬಾರದು ಎನ್ನುವ ಸಲಹೆ ಬಂದವು. ಈ ನಿಟ್ಟಿನಲ್ಲಿ ಮುಂದಾದಾಗ ಕೆಲವರು ಹಣದ ನೆರವಿನ ವಿಷಯ ಎತ್ತಿದರು, ನಾನು ಅದಕ್ಕೆ ಸಮ್ಮತಿಸಲಿಲ್ಲ. ನಂತರ ನಟ ದರ್ಶನ್ ಅವರು ಸಮಾಧಿ ನಿರ್ಮಿಸಲು ಅಗತ್ಯವಾದ ಕಲ್ಲು ನೀಡಲಿದ್ದಾರೆ ಎಂದು ಹೇಳುವ ಮೂಲಕ ರಾಮನಗರದ ಒಬ್ಬರು ಕಲ್ಲುಗಳನ್ನು ತಂದೊಪ್ಪಿಸಿದರು. ಈ ನಂತರ ಸಮಾಧಿ ನಿರ್ಮಾಣಕ್ಕೆಂದು ಕೆಲವರು ತಾವಾಗಿಯೇ ಹಣ ಕಳುಹಿಸಲು ಆರಂಭಿಸಿದರು. ಇದರ ಪ್ರತಿಯೊಂದೂ ಮಾಹಿತಿ ಸ್ಕ್ರೀನ್‌ಶಾಟ್ ಮೂಲಕ ಎಲ್ಲರಿಗೂ ಗ್ರೂಪ್‌ನಲ್ಲಿ ತಿಳಿದಿದೆ ಎಂದು ಹೇಳಿದರು.
ಇದಾದ ನಂತರ ಅರಣ್ಯ ಇಲಾಖೆಯವರು ನೀವು ನಿರ್ಮಿಸುವುದನ್ನು ನಿಲ್ಲಿಸಿ, ನಾವೇ ನಿರ್ಮಿಸುತ್ತೇವೆ. ಹೀಗಾಗಿ ಕಲ್ಲನ್ನು ವಾಪಸ್ ಕೊಂಡೊಯ್ಯಿರಿ ಅಥವಾ ಅದರ ಹಣ ಪಡೆಯಿರಿ ಎಂದು ತಿಳಿಸಿ, ನನ್ನ ಖಾತೆಗೆ 30 ಸಾವಿರ ರೂ. ಜಮಾ ಮಾಡಿದ್ದಾರೆ. ಈ ಎಲ್ಲ ಮಾಹಿತಿ ಗ್ರೂಪ್‌ನಲ್ಲಿ ಶೇರ್ ಆಗಿದೆ. ಈ ರೀತಿ ಒಟ್ಟು 80 ಸಾವಿರ ರೂ. ಮಾತ್ರ ಜಮಾ ಆಗಿದ್ದು, ನಾನೇನು ಅರ್ಜುನನ ಹೆಸರಿನಲ್ಲಿ ಯಾರನ್ನೂ ವಂಚಿಸಿಲ್ಲ ಎಂದರು.
ವಂಚನೆ ಮಾಡಿದ್ದೇನೆ ಎಂದರೆ ಆ ಕುರಿತು ನನ್ನ ಬ್ಯಾಂಕ್ ಖಾತೆಯನ್ನು ಯಾರು ಬೇಕಾದರೂ ಪರಿಶೀಲಿಸಬಹುದಾಗಿದೆ. ಪ್ರಚಾರದ ಗೀಳಿನಿಂದಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಎಚ್.ಡಿ.ಕೋಟೆಯ ಸಿದ್ದಪ್ಪಾಜಿ, ಚೇತನ್ ಇದ್ದರು.