ಯಾರಿಗೂ ಬೇಡವಾದ ಹುಡಾ ಸಿಎ ಸೈಟ್

HUDA BUILDING
Published on

ಬಸವರಾಜ ಇದ್ಲಿ ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಖಾಲಿ ಇರುವ ನಾಗರಿಕ ಸೌಲಭ್ಯಗಳ (ಸಿಎ- ಸಿವಿಕ್ ಅಮೆನಿಟಿಸ್) ನಿವೇಶನಗಳನ್ನು ಹಂಚಿಕೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಪ್ರಕಟಣೆ ಹೊರಡಿಸಿ ತಿಂಗಳಾಗುತ್ತ ಬಂದರೂ ಅತ್ಯಂತ ಕನಿಷ್ಠ ಅರ್ಜಿ ಹಾಗೂ ವಿಚಾರಣೆಗಳು ಬಂದಿರುವುದು ಅಚ್ಚರಿ ಮೂಡಿಸಿದೆ.

ಡಿಸೆಂಬರ್ 2024ರ 31ರಂದು ದಿನಪತ್ರಿಕೆಗಳಲ್ಲಿ ನೋಟಿಫಿಕೇಶನ್ ಹೊರಡಿಸಿರುವ ಹುಡಾ, ಆಸಕ್ತರು ಅರ್ಜಿ ಸಲ್ಲಿಸುವಂತೆ ಕೋರಿತ್ತು. ಆದರೆ, ಈ ವರೆಗೆ ಕೇವಲ ಬೆರಳೆಣಿಕೆಯಷ್ಟು ಅರ್ಜಿಗಳು ಬಂದಿದ್ದು, ಸಿಎ ಸೈಟ್​ಗಳು ಯಾರಿಗೂ ಬೇಡವೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಹುಡಾ ಬಳಿ ಸದ್ಯ 50ಕ್ಕೂ ಹೆಚ್ಚು ಸಿಎ ಸೈಟ್​ಗಳು ಇವೆ. ಹಾಗೇ ನೋಡಿದರೆ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸಾರ್ವಜನಿಕ ಬಳಕೆಗಾಗಿ ಜಾಗ ಬಯಸುವವರ ಸಂಖ್ಯೆ ಬಹು ದೊಡ್ಡದಿದೆ. ಆದರೆ, ಸರ್ಕಾರ ನಿಗದಿ ಪಡಿಸಿರುವ ಸಿಎ ಸೈಟ್​ಗಳ ದರ ಇವುಗಳಿಂದ ದೂರ ಉಳಿಯುವಂತೆ ಮಾಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಎ ಸೈಟ್​ಗಳನ್ನು ಸಾರ್ವಜನಿಕ ಬಳಕೆಗಾಗಿ 30 ವರ್ಷದ ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತದೆ. ಹೀಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸಿಎ ಸೈಟ್​ಗಳಿಗೆ ಪ್ರಸ್ತುತ ಆಯಾ ಪ್ರದೇಶ ಸಬ್ ರೆಜಿಸ್ಟರ್ ವ್ಯಾಲ್ಯೂ (ಎಸ್​ಆರ್) ಅಂದರೆ ಸರ್ಕಾರ ನಿಗದಿ ಪಡಿಸಿದ ಖರೀದಿ ದರದಂತೆ ಬೆಲೆ ನಿಗದಿ ಮಾಡಲಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ನೀಡುವ ಸೈಟ್​ಗಳಿಗೆ ಇಷ್ಟು ಬೆಲೆ ನೀಡುವುದು ತರವಲ್ಲ, ಹಾಗಾಗಿ ಕಡಿಮೆ ಮಾಡಬೇಕು ಎಂಬುದು ಸಿಎ ಸೈಟ್ ಆಕಾಂಕ್ಷಿಗಳ ಬೇಡಿಕೆ.

ಗುತ್ತಿಗೆ ಆಧಾರದಲ್ಲಿ ಸಿಎ ಸೈಟ್ ಜಾಗವನ್ನು ಪ್ರತಿ ಚದರ ಮೀಟರ್​ಗೆ ಎಂಟು, ಹತ್ತು ಸಾವಿರ ರೂ. ಕೆಲವೆಡೆ 13 ಸಾವಿರ ರೂ. ನಿಗದಿ ಮಾಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ನೀಡುವುದಾದರೆ ಇದೇ ಹಣದಲ್ಲಿ ಇವುಗಳ ಪಕ್ಕದಲ್ಲಿಯೇ ಜಮೀನುಗಳು ಖರೀದಿಗೆ ಸಿಗುತ್ತವೆ. ಹಾಗಿರುವಾಗ ಗುತ್ತಿಗೆ ಆಧಾರದ ಸೈಟ್ ಏಕೆ ಬೇಕು ಎಂಬ ತರ್ಕವನ್ನು ಜನರು ಮುಂದಿಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಸಿಎ ಸೈಟ್ ಕೇಳುವವರು ಇಲ್ಲದಂತಾಗಿದೆ.

ಎಲ್ಲೆಲ್ಲಿ ನಿವೇಶನ:

ಗೋಪನಕೊಪ್ಪ, ಬೆಂಗೇರಿ, ಭೈರಿದೇವರಕೊಪ್ಪ, ಅಮರಗೋಳ, ರಾಯನಾಳ, ಉಣಕಲ್ಲ, ಗಬ್ಬೂರ, ಸುತಗಟ್ಟಿ, ನಾಗಶೆಟ್ಟಿಕೊಪ್ಪ, ಗಾಮನಗಟ್ಟಿ, ಗೋಕುಲ, ಯಲ್ಲಾಪುರ, ಇಟಿಗಟ್ಟಿ, ಮಾಳಾಪುರ, ನವಲೂರ, ನರೇಂದ್ರ, ತಡಸಿನಕೊಪ್ಪ, ಕೆಲಗೇರಿ, ದೊಡ್ಡನಾಯಕನ ಕೊಪ್ಪ, ಲಕಮನಹಳ್ಳಿ, ಹಿರೇಮಲ್ಲಿಗವಾಡ, ಸತ್ತೂರಗಳಲ್ಲಿ ಸಿಎ ಸೈಟ್​ಗಳು ಇವೆ.

ಸಾರ್ವಜನಿಕ ಸೇವೆಗಾಗಿ ಇರುವ ಸಂಘ, ಸಂಸ್ಥೆಗಳು, ಶೈಕ್ಷಣಿಕ ಉದ್ದೇಶ ಉಳ್ಳವರು, ಹಾಲಿನ ಉತ್ಪನ್ನ ಮಾರಾಟ, ಇತ್ಯಾದಿ ಕೆಲಸಗಳಿಗಾಗಿ ತಾವು ಯಾವ ಉದ್ದೇಶಕ್ಕಾಗಿ ನಿವೇಶನ ಪಡೆಯುತ್ತಿದ್ದೇವೆ ಎಂದು ನಮೂದಿಸಿ ಅರ್ಜಿ ಸಲ್ಲಿಸಬಹುದು. ಕೇಂದ್ರ, ರಾಜ್ಯ, ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿಗಳು ಸಿಎ ನಿವೇಶಗಳನ್ನು ಕೋರಿದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈಗಲೂ ಆಸಕ್ತರು, ನಿಗದಿತ ನಿವೇಶನ ಮಂಜೂರಾತಿ ಅರ್ಜಿಗಳನ್ನು ಸಾವಿರ ರೂ. ಶುಲ್ಕ ಪಾವತಿಸಿ ಪ್ರಾಧಿಕಾರದಲ್ಲಿ ಪಡೆಯಬಹುದು. ಫೆಬ್ರವರಿ 1ರ ವರೆಗೆ ಸಲ್ಲಿಸಲು ಕಾಲಾವಕಾಶ ಇದೆ.

ಪ್ರಾಧಿಕಾರದಲ್ಲಿರುವ ಸುಮಾರು 50ಕ್ಕೂ ಹೆಚ್ಚು ಸಿಎ ಸೈಟ್​ಗಳಿಗೆ ಸಾರ್ವಜನಿಕ ಉದ್ದೇಶ ಹೊಂದಿರುವ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ವರೆಗೆ 18 ಅರ್ಜಿಗಳು ಮಾತ್ರ ಬಂದಿವೆ. ದರ ಕಡಿಮೆಯಾದರೆ ಅನುಕೂಲವಾಗುತ್ತದೆ ಎಂಬುದು ಕೆಲವರ ಮನವಿಯಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಸಿಎ ಸೈಟ್​ಗಳು ಸಾಮಾಜಿಕ ಚಟಿವಟಿಕೆಗೆ ಬಳಕೆಯಾಗಬೇಕು. ಈ ದಿಸೆಯಲ್ಲಿ ಹುಡಾ ಅಗತ್ಯ ಕ್ರಮ ಕೈಗೊಳ್ಳಲಿದೆ. ಶಾಕೀರ್ ಸನದಿ, ಹುಡಾ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net