ಹಸಿವಿನಿಂದ ಯಾರೂ ಬಳಲಬಾರದು

30KWR1-Rupali Naik Gp Visit
Published on

ಕಾರವಾರ: ಲಾಕ್ ಡೌನ್ ಅವಧಿಯಲ್ಲಿ ಹಸಿವಿನಿಂದ ಯಾರೂ ಬಳಲದಂತೆ ಆಹಾರ ಸಾಮಗ್ರಿಗಳ ಪೂರೈಕೆಯಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ಅಸ್ನೋಟಿ, ಹಣಕೋಣ, ಘಾಡಸಾಯಿ, ದೇವಳಮಕ್ಕಿ, ಮುಡಗೇರಿ ಗ್ರಾಮ ಪಂಚಾಯಿತಿಗಳಿಗೆ ಶನಿವಾರ ಹಾಗೂ ಭಾನುವಾರ ಭೇಟಿ ನೀಡಿದ ಅವರು, ಗ್ರಾಮ ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆ ನಡೆಸಿ, ಸಮಸ್ಯೆ ಆಲಿಸಿದರು. ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಕೋವಿಡ್ ಸೋಂಕಿತರ ಮಾಹಿತಿ ಪಡೆದ ಶಾಸಕರು, ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೋಲೇಷನ್​ನಲ್ಲಿ ಇರಲು ಸಮಸ್ಯೆಯಾದರೆ ಅಂಥವರಿಗೆ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸುವ ವ್ಯವಸ್ಥೆ ಮಾಡಬೇಕು. ಕೋವಿಡ್ ಕೇರ್ ಸೆಂಟರ್​ನಲ್ಲಿ ವೈದ್ಯರ ನಿಗಾ ಇರಲಿದ್ದು, ಆರೋಗ್ಯ ಬಿಗಡಾಯಿಸಿದಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಲಿದೆ. ಹೋಂ ಐಸೋಲೇಷನ್​ನಲ್ಲಿರುವ ಪ್ರತಿ ವ್ಯಕ್ತಿಯನ್ನೂ ಆಶಾ ಕಾರ್ಯಕರ್ತೆಯರು ಪ್ರತಿ ದಿನ ಭೇಟಿಯಾಗಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಲಾಕ್ ಡೌನ್ ಸಮಯದಲ್ಲಿ ಎಲ್ಲೆಡೆ ಆಹಾರ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ಆಹಾರ ಪದಾರ್ಥಗಳ ದರಪಟ್ಟಿಯನ್ನು ಆಯಾ ವಾಹನಗಳಲ್ಲಿ ಪ್ರದರ್ಶಿಸಬೇಕು. ಯಾರೊಬ್ಬರೂ ಹಸಿವಿನಿಂದ ಬಳಲದಂತೆ ಎಚ್ಚರಿಕೆ ವಹಿಸಬೇಕು. ಆಹಾರ ವಸ್ತುಗಳನ್ನು ಕೊಡುವಲ್ಲಿ ತಮ್ಮ ಸಹಾಯ ಇದ್ದೇ ಇದೆ ಎಂದು ಶಾಸಕರು ತಿಳಿಸಿದರು. ಎಸಿ ವಿದ್ಯಾಶ್ರೀ ಚಂದರಗಿ, ತಹಸೀಲ್ದಾರ್ ಎನ್.ಎಫ್.ನರೋನಾ, ತಾಪಂ ಇಒ ಆನಂದಕುಮಾರ್, ಸಿಪಿಐ ನಿತ್ಯಾನಂದ ಪಂಡಿತ ಇದ್ದರು.
ವೈದ್ಯರ ನೇಮಕ ಸ್ವಾಗತಾರ್ಹ
ಕ್ರಿಮ್್ಸ ಆಸ್ಪತ್ರೆಗೆ 6 ತಜ್ಞ ವೈದ್ಯರು ಹಾಗೂ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ 4 ತಜ್ಞ ವೈದ್ಯರನ್ನು ನೇಮಕ ಮಾಡಿದ್ದು, ಸ್ವಾಗತಾರ್ಹ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ. ವೈದ್ಯರ ಕೊರತೆಯ ಬಗ್ಗೆ ಸಿಎಂ ಹಾಗೂ ಆರೋಗ್ಯ ಸಚಿವರ ಗಮನ ಸೆಳೆಯಲಾಗಿತ್ತು ಎಂದಿದ್ದಾರೆ. ಇನ್ನು ಕ್ಷೇತ್ರದ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆ ಇದ್ದು, ಅಲ್ಲಿಯೂ ವೈದ್ಯರ ನೇಮಕಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಡಗೇರಿ ಗ್ರಾಪಂ ವ್ಯಾಪ್ತಿಯ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದಿದ್ದಾರೆ.

ಜನ ಅಪಪ್ರಚಾರ, ವದಂತಿಗಳಿಗೆ ಕಿವಿಗೊಡಬಾರದು. ಕೋವಿಡ್ ನಿಯಂತ್ರಣ ಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು.ರೂಪಾಲಿ ನಾಯ್ಕಶಾಸಕಿ, ಕಾರವಾರ-ಅಂಕೋಲಾ ಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net