

ರಾಯಚೂರು: ಜನರಲ್ಲಿ ನವಭಾರತ ಸಾಕ್ಷರತಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಲು ಅಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಹೇಳಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 15 ವರ್ಷ ಮೇಲ್ಪಟ್ಟವರು ಯಾವುದೇ ಕಾರಣಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಬಾರದು ಎಂದರು.
2027ರ ವೇಳೆಗೆ ದೇಶದಲ್ಲಿ ಅನಕ್ಷರತೆ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಮೂಲಕ ನವ ಸಾಕ್ಷರತೆ ಜೀವನವನ್ನು ಪರಿವರ್ತಿಸುವುದಲ್ಲದೇ ಉಜ್ವಲ ಭವಿಷ್ಯ ನಿರ್ಮಾಣ ಮಾಡಲಾಗುತ್ತಿದೆ.
ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ಬೆಳೆಸುವಲ್ಲಿ ಅಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಡಾ.ಕೆ.ಆರ್.ದುರಗೇಶ ಅಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಕಾರಿ ಮಲ್ಲಿಕಾರ್ಜುನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಜಿಲ್ಲಾ ಕಾರ್ಮಿಕ ಅಕಾರಿ ಆರತಿ, ನಗರಸಭೆ ವ್ಯವಸ್ಥಾಪಕ ರಾಜು ಹಾಗೂ ವಿವಿಧ ಇಲಾಖೆ ಸಾಕ್ಷರತಾ ಸಂಯೋಜಕರು ಉಪಸ್ಥಿತರಿದ್ದರು.