

ಹುನಗುಂದ : ಪ್ರಜಾಪ್ರಭುತ್ವದ ಮೂಲ ಆಶಯ ಮತದಾನ. ಭಾರತದಂತಹ ದೇಶದಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ ಎಂದು ಶಿರಸ್ತೇದಾರ ಶ್ರವಣಕುಮಾರ ಮುಂಡೆವಾಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲೂಕು ಮತದಾರ ಸಾಕ್ಷರತಾ ಕ್ಲಬ್ ನಡೆಸಿದ 2024-25 ನೇ ಸಾಲಿನ ಮತದಾರರ ದಿನಾಚರಣೆ ನಿಮಿತ್ತದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ದೇಶದ ಆಡಳಿತದ ಜೀವನಾಡಿ ಮತದಾನ. ಅದರಿಂದ ಯಾರೂ ವಂಚಿತ ಆಗಬಾರದು. ಈ ದೆಸೆಯಲ್ಲಿ ಚುನಾವಣೆ ಆಯೋಗ ನಿರಂತರ ಶ್ರಮಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ವಿ.ಮ. ಕಾಲೇಜು ಉಪನ್ಯಾಸಕಿ ಡಾ. ನಾಗರತ್ನ ಕಡಬಗೇರಿ ಮಾತನಾಡಿ, ಸಂವಿಧಾನ ರಚನೆ, ರೂಪುರೇಷೆ, ಆಶಯ, ಮಹತ್ವ ಕುರಿತು ಸವಿಸ್ತಾರವಾಗಿ ಹೇಳಿದರು. ಇದರೊಂದಿಗೆ ಪ್ರತಿಯೊಬ್ಬರಲ್ಲಿ ಸೂಕ್ತ ಜಾಗತಿ ಮೂಡಿಸುವುದು ಅವಶ್ಯ ಎಂದರು.
ಇಎಲ್ ಸಿ ಅಧ್ಯಕ್ಷ ಬಿ.ವಿ. ಬೀರಕಬ್ಬಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕ ಎಸ್.ಕೆ. ಕೊನೆಸಾಗರ, ಪ್ರಾಚಾರ್ಯ ಶರಣಪ್ಪ ಹೂಲಗೇರಿ, ಉಪನ್ಯಾಸಕರಾದ ಬಿ.ಆರ್. ಚೌಗಲೆ ಮತ್ತು ಜೆ.ಎಂ. ಹುನಗುಂದ ಉಪಸ್ಥಿತರಿದ್ದರು.
ಐ.ಎಚ್. ನಾಯಿಕ ಸ್ವಾಗತಿಸಿದರು. ಛಾಯಾ ಪುರಂದರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್.ಟಿ. ಅಗಸಿಮುಂದಿನ ವಂದಿಸಿದರು . ಡಾ.ಎನ್.ವೈ. ನದ್ಾ ನಿರೂಪಿಸಿದರು.