

ಗುಳೇದಗುಡ್ಡ: ಬಡವರು, ಹಿಂದುಳಿದವರು ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಕಟ್ಟಡ, ಮೂಲಸೌಕರ್ಯಗಳಿಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು. ಒಂದು ಹೆಣ್ಣು ಮಗಳು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶಿಕ್ಷಣ ಪಡೆದಂತೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಎಚ್‌ಪಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ 2022-23ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ತಾಲೂಕಿನ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿಯ ಅಲ್ಲೂರ ಎಸ್‌ಪಿ ಹತ್ತಿರ 450 ಮೀಟರ್ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪದವಿ ಕಾಲೇಜುಗಳಿಗೆ ಸರ್ಕಾರದ ಅನುದಾನ ತುರುವುದು ಕಷ್ಟದ ಕೆಲಸ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ ಅವರ ಕಾಳಜಿಯಿಂದ ಗುಳೇದಗುಡ್ಡದ ಪದವಿ ಕಾಲೇಜಿಗೆ ಒಟ್ಟು 5.75 ಕೋಟಿ ರೂ. ಮಂಜೂರಾಗಿದ್ದು, ಈಗ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಸಂಕೇಶ್ವರ ಸಂಗಮ ರಸ್ತೆಯ ಅಲ್ಲೂರ ಎಸ್‌ಪಿ ಗ್ರಾಮದ ಹತ್ತಿರ ಒಂದಿಷ್ಟು ರಸ್ತೆ ಕಾಮಗಾರಿ ಬಹಳದಿನಗಳಿಂದ ನೆನೆಗುದಿಗೆ ಬಿದ್ದು, ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಈಗ ರಸ್ತೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ, ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ, ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ಶಶಿಧರ ಬಿಜ್ಜಳ, ಎಂ.ಎಂ. ಜಮಖಾನಿ, ಪುರಸಭೆ ಸದಸ್ಯ ಉಮೇಶ ಹುನಗುಂದ, ಯಲ್ಲಪ್ಪ ಮನ್ನಿಕಟ್ಟಿ, ಸಂತೋಷ ನಾಯನೇಗಲಿ, ಹನಮಂತ ಪತ್ತಾರ, ಜಮೀರ ಮೌಲ್ವಿ, ವೈ. ಬಿ. ಗೌಡರ, ಡಿ.ಡಿ. ಗೌಡರ, ಸಲಿಂ ಮೋಮಿನ, ರಾಜು ಸಂಗಮ, ಕೀರಪ್ಪ ತಳವಾರ, ಮುಬಾರಕ ಮಂಗಳೂರು, ಲೋಕೋಪಯೋಗಿ ಎಇಇ ವೈ.ಎ್. ಆಡಿನ, ಗೃಹಮಂಡಳಿ ಎಇಇ ವಿಜಯ ದೇಸಿಂಗೆ, ಎ.ಕೆ. ಮಕಾನದಾರ, ಗುತ್ತಿಗೆದಾರರಾದ ಸಿ.ವಿ. ಭಿಕ್ಷಾವತಿಮಠ, ವಿನಾಯಕ ದೊಡಮನಿ, ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಪ್ಪ, ಪ್ರಾದ್ಯಾಪಕ ಪಕೀರಪ್ಪ ಚನ್ನಪ್ಪಗೌಡ್ರ ಮತ್ತಿತರರಿದ್ದರು.