ಹಳ್ಳಿ ಮೈಸೂರು ಜನರ ಸಮಸ್ಯೆ ಆಲಿಸುವವರಿಲ್ಲ

1001424895
ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಶ್ರೀಧರ್ ಗೌಡ, ನಾಗರಾಜು, ಮೋಹನ್ ರಾಜೇಗೌಡ ಇದ್ದರು.
Published on

ಹೊಳೆನರಸೀಪುರ: ಅರಕಲಗೂಡು ಕ್ಷೇತ್ರಕ್ಕೆ ಆಕಸ್ಮಿಕ ಶಾಸಕರಾಗಿ ಆಯ್ಕೆಯಾಗಿ ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇಳದೆ ರಾಜಕಾರಣದಲ್ಲಿ ನಿರಾಸಕ್ತಿ ಹೊಂದಿದ್ದಾರೆ ಎಂದು ಅರಕಲಗೂಡು ಕ್ಷೇತ್ರದ ಕಾಂಗ್ರೆಸ್ ಮುಖಂಡ ಶ್ರೀಧರ್‌ಗೌಡ ದೂರಿದ್ದಾರೆ.

ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ಶ್ರೀ ಆದಿಶಕ್ತಿ ಶಿಗೆ ತಾಳಮ್ಮ ದೇವಸ್ಥಾನದ ಆವರಣದಲ್ಲಿ ಗುರುವಾರ ಹಳ್ಳಿ ಮೈಸೂರು ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅರಕಲಗೂಡು ಕ್ಷೇತ್ರಕ್ಕೆ ಆಕಸ್ಮಿಕ ಶಾಸಕರಾಗಿ ಆಯ್ಕೆಯಾದ ಅವರು ಮತದಾರರಿಂದ ಕಾಣೆಯಾಗಿದ್ದಾರೆ ಎಂದು ಪರೋಕ್ಷವಾಗಿ ಎ.ಮಂಜು ಅವರನ್ನು ಟೀಕಿಸಿದ್ದಾರೆ. ಅತೀ ಹಿಂದುಳಿದ ಹೋಬಳಿ ಪಟ್ಟಿಯಲ್ಲಿರುವ ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ಪೊಲೀಸ್ ಠಾಣೆಯಲ್ಲಿ ನಾಡಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕುಂದು ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಗಳು ನೆರವೇರದೆ ಜನಸಾಮಾನ್ಯರಿಗೆ ಅನನುಕೂಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೋಬಳಿಯ ಮುಖಂಡರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಲಾಗುವುದು. ಹಳ್ಳಿ ಮೈಸೂರು ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ರೂಪಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲರೂ ಒತ್ತಡ ಹಾಕೋಣ. ಈ ಹೋಬಳಿಯ ಅಭಿವೃದ್ಧಿಗಾಗಿ ನಮ್ಮ ನಾಯಕರಿಗೆ ಮನವರಿಕೆ ಮಾಡುವ ಮೂಲಕ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಂಗಳಾಪುರ ನಾಗರಾಜ್ ಮಾತನಾಡಿ, ನೂತನವಾಗಿ ಹಳ್ಳಿ ಮೈಸೂರು ಬ್ಲಾಕ್ ಮಟ್ಟಕ್ಕೆ ಆಯ್ಕೆಗೊಂಡಿರುವ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕು ಎಲ್ಲರನ್ನೂ ಜತೆಗೂಡಿ ಪಕ್ಷದ ವೇದಿಕೆಗೆ ಕರತರಬೇಕು ಎಂದು ಹೇಳಿದರು.

ಹಳ್ಳಿ ಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಗೌಡ ಮಾತನಾಡಿದರು. ನೂತನವಾಗಿ ಆಯ್ಕೆಗೊಂಡ ಹಿಂದುಳಿದ ವರ್ಗ ಹಳ್ಳಿಮೈಸೂರು ಬ್ಲಾಕ್ ಅಧ್ಯಕ್ಷ ಎಚ್.ಆರ್.ಲೋಕೇಶ್, ಉಪಾಧ್ಯಕ್ಷ ಯೋಗಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಲ್.ಮಹದೇವ, ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಮಂಜೇಗೌಡ, ಜಿಲ್ಲಾ ಕಾರ್ಯದರ್ಶಿ ಮೋಹನ ಅವರನ್ನು ಅಭಿನಂದಿಸಲಾಯಿತು.

ಮುಖಂಡರಾದ ಹೊನ್ನ ಶೆಟ್ಟಿ, ಮುಜಾಹಿದ್ ಅಹಮದ್, ಚಿಕ್ಕೇಗೌಡ ಪುಟ್ಟೇಗೌಡ ಮಹಾದೇವ, ಹೇಮಂತ್ ಕುಮಾರ್, ಜಿಪಂ ಮಾಜಿ ಸದಸ್ಯ ಪ್ರಸನ್ನ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net