

ಮೈಸೂರು: ಶಾಸಕ ಜಿ.ಟಿ. ದೇವೇಗೌಡರ ನಡೆ ಹಾಗೂ ಮೀನಿನ ಹೆಜ್ಜೆ ಎರಡನ್ನೂ ಕಂಡು ಹಿಡಿಯಲು ಆಗವುದಿಲ್ಲ ಎಂದು ನಾನು ಮೊದಲೇ ಹೇಳಿದ್ದೆ, ಆ ಮಾತು ಇಂದು ನಿಜವಾಗಿದೆ. ಜಿ.ಟಿ. ದೇವೇಗೌಡರು ಜೆಡಿಎಸ್‌ನಲ್ಲೇ ಉಳಿದಿರುವುದರಲ್ಲಿ ವಿಶೇಷತೆ ಏನು ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ಕಾಂಗ್ರೆಸ್‌ನವರು ಆಹ್ವಾನಿಸಲಿಲ್ಲ, ಬಿಜೆಪಿಯೂ ಆಹ್ವಾನಿಸಲಿಲ್ಲ. ಅವರಿಗೆ ಹೇಗೆ ಬೇಕೋ ಹಾಗೆ ತಾಳಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿದ್ದಾರೆ. ಕಾಂಗ್ರೆಸ್‌ನವರು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ. ಆದರೆ, ನಾವಂತು ಅವರನ್ನು ಆಹ್ವಾನಿಸಲಿಲ್ಲ ಎಂದು ಹೇಳಿದರು.
ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಗೊಂಡರು. ಇದೀಗ ಆ ಪಕ್ಷದಲ್ಲೇ ಉಳಿದುಕೊಂಡಿದ್ದಾರೆ. ಅದರಲ್ಲಿ ವಿಶೇಷ ಏನು ಕಾಣುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಎಲ್ಲ ಶಾಸಕರೊಂದಿಗೆ ಆತ್ಮೀಯನಾಗಿದ್ದೇನೆ. ಅದೇ ರೀತಿ ಜಿ.ಟಿ. ದೇವೇಗೌಡರೊಂದಿಗೂ ಆತ್ಮೀಯನಾಗಿದ್ದೇನೆ. ಬಿಜೆಪಿಗೆ ಚಾಮುಂಡೇಶ್ವರಿ ಕ್ಷೇತ್ರ ಮಾತ್ರವಲ್ಲ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಮುಂದಿನ ಬಾರಿಯೂ ನಮ್ಮದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದರು.
ಮಳೆ ಹಾನಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಎಲ್ಲ ಮಾಹಿತಿಗ ಳನ್ನು ಪಡೆದಿದ್ದಾರೆ. ಜಿಲ್ಲಾಡಳಿತ ಸಹ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಪರಿಶೀಲಿಸಿ ಅಗತ್ಯ ಅನುದಾನವನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಪಾರಂಪರಿಕ ಕಟ್ಟಡಗಳು ಕುಸಿಯುತ್ತಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ನಂತರ ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು ಎಂದರು. ಶೀಘ್ರದಲ್ಲೇ ದಸರಾ ಮಹೋತ್ಸವದ ಲೆಕ್ಕವನ್ನು ನೀಡಲಾಗುವುದು. ಈಗಾಗಲೇ 19 ಉಪ ಸಮಿತಿಗಳು ಲೆಕ್ಕದ ವರದಿ ನೀಡಿದ್ದು, ಇನ್ನು 2 ಸಮಿತಿ ನೀಡಲು ಬಾಕಿ ಇದೆ. ಆ ವರದಿ ಬಂದ ಕೂಡಲೇ ಲೆಕ್ಕಪತ್ರ ನೀಡಲಾಗುವುದು ಎಂದು ಹೇಳಿದರು.