

ಹೊಳೆನರಸೀಪುರ ; ಕಾನೂನನ್ನು ಕೈಗೆ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅಪರಾಧ ಪ್ರಕರಣಗಳು ನಡೆದಾಗ ಹತ್ತಿರದ ಪೊಲೀಸ್ ಠಾಣೆ ಗಮನಕ್ಕೆ ತಂದಲ್ಲಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶಾಲು ಹೇಳಿದರು.
ಶುಕ್ರವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ಮೊನ್ನೆ ಡಾಬಾದಲ್ಲಿ ನಡೆದ ಘಟನೆಯಲ್ಲಿ ಡಾಬಾ ಮಾಲೀಕನ ಮೇಲೆ ಆಯುಧದಿಂದ ಹಲ್ಲೆ ನಡೆದಿದೆ. ಡಾಬಾ ಮಾಲೀಕ ಬೈದ ಎಂದಾಗ ಆತನ ಮೇಲೆ ಹಲ್ಲೆ ಮಾಡುವ ಬದಲು ನಮಗೆ ಕರೆ ಮಾಡಿದ್ದರೆ ನಾವು ತಕ್ಷಣ ಸ್ಥಳಕ್ಕೆ ಬಂದು ಕ್ರಮ ತೆಗದುಕೊಳ್ಳುತ್ತಿದ್ದೆವು. ನಾವು ಯಾವುದೇ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ.್ಲ ಕೂಲಂಕುಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಬಡಾವಣೆಯ ರಾಘವೇಂದ್ರ ಮಾತನಾಡಿ ಅಂಬೇಡ್ಕರ್ ನಗರದಲ್ಲಿ 50 ಜನರನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಿದ್ದಾರೆ. ಎಲ್ಲರನ್ನೂ ಪಟ್ಟಿಯಿಂದ ಕೈಬಬಿಡಬೇಕು ಎಂದು ಮನವಿ ಮಾಡಿದರು. ಶಾಲೂ ಮಾತನಾಡಿ, 50 ಜನರು ಪಟ್ಟಿಯಲ್ಲಿಲ್ಲ. 12 ಜನರು ಇದ್ದಾರೆ. ಅದರಲ್ಲಿ ಒಬ್ಬರನ್ನು ಕೈ ಬಿಟ್ಟಿದ್ದೇವೆ ಎಂದರು.
ಎಲ್ಲರನ್ನೂ ಕೈ ಬಿಡಿ ಎಂದು ಮನವಿ ಮಾಡಿದಾಗ ಇದಕ್ಕೆ ಪ್ರತಿಕ್ರಿಯಿಸಿದ ವೃತ್ತನಿರೀಕ್ಷಕ ಪ್ರದೀಪ್, ಮನಬಂದಂತೆ ರೌಡಿಶೀಟ್ ತೆಗೆಯುವುದಕ್ಕೆ ಅಥವಾ ಕೈ ಬಿಡುವುದಕ್ಕೆ ಆಗುವುದಿಲ್ಲ. ಇಂತಿಷ್ಟು ಪ್ರಕರಣಗಳಲ್ಲಿ ಭಾಗಿ ಆಗಿದ್ದರೆ ರೌಡಿ ಶೀಟರ್ ತೆಗೆಯಬೇಕೆಂಬ ನಿಯಮ ಇದೆ. ನಂತರ 10 ವರ್ಷ ಆತ ಯಾವುದೇ ಪ್ರಕರಣಗಳಲ್ಲಿ ಭಾಗಿ ಆಗಿಲ್ಲ ಎಂದರೆ ಅಂತಹವರನ್ನು ಕೈ ಬಿಡಲೇಬೇಕೆಂದೂ ನಿಯಮ ಇದೆ ಎಂದರು.
ಕಾನೂನಿನ ಮುಂದೆ ಎಲ್ಲರೂ ಸಮಾನರು. ನಿಮ್ಮ ದೂರನ್ನು ದಾಖಲಿಸಿಕೊಳ್ಳದಿದ್ದಾಗ ನಮ್ಮ ಗಮನಕ್ಕೆ ತಂದರೆ ನೊಂದವರಿಗೆ ನ್ಯಾಯ ಒದಗಿಸುತ್ತೇವೆ. ಅನಿವಾರ್ಯ ಸಂದರ್ಭದಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ನಮ್ಮ ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ, ಗಾಂಜಾ ಮಾರಾಟ ಹೆಚ್ಚಾಗಿದೆ. ಕೆಲವರು ಅಂಬೇಡ್ಕರ್ ನಗರದವರೆಲ್ಲರೂ ಕೆಟ್ಟವರು ಎಂದು ಬಿಂಬಿಸುತ್ತಿದ್ದಾರೆ. ಇದನ್ನು ಪೊಲೀಸರು ನಂಬಬಾರದು. ನಮ್ಮಲ್ಲಿ ಅನೇಕರು ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದು ಅವರಿಗೆಲ್ಲ ಉಚಿತವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಡಿ, ನಮ್ಮ ಬಡಾವಣೆಯ ರಸ್ತೆಗಳ ಮೇಲೆಲ್ಲ ಹುಲ್ಲುಹಾಕುತ್ತಿದ್ದಾರೆ. ಇದರಿಂದ ವಾಹನಗಳ ಓಡಾಟಕ್ಕೆ ತೀವ್ರತೊಂದರೆ ಆಗಿದೆ, ಬೆಳಗಿನ ಜಾವದಿಂದಲೇ ಮದ್ಯಮಾರಾಟ ಪ್ರಾರಂಭವಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ಎಡಿ ಕಾಲನಿ ಸಮೀಪ ಹಾಗೂ ಸೆಸ್ಕ್ ಎದುರು ಸಿಸಿ ಕ್ಯಾಮರಾ ಅಳವಡಿಸಿ ಎಂದು ವಿವಿಧ ಬಡಾವಣೆ ನಿವಾಸಿಗಳು ಮನವಿ ಮಾಡಿದರು.
ನಗರಠಾಣೆ ಎಸ್‌ಐ ಅಭಿಜಿತ್, ಮುಖ್ಯಪೇದೆ ಮಂಗಳಾ, ಪಿಸಿ ಜಗದೀಶ್, ಸ್ಥಳೀಯ ನಿವಾಸಿಗಳಾದ ಎಚ್.ಟಿ. ಲಕ್ಷ್ಮಣ, ಜಿಪಂ ಮಾಜಿ ಸದಸ್ಯ ಎಚ್.ವೈ. ಚಂದ್ರಶೇಖರ್, ವಕೀಲ ಎಚ್.ಆರ್. ಮಂಜುನಾಥ್, ಮುತ್ತುರಾಜ್, ತಾರೇಶ್, ಜವರೇಶ್, ಸುಪ್ರೀತ್ ಪಾಸ್ವಾನ್, ಜಾರ್ಜ್, ವಸಂತಕುಮಾರ್, ಪುನೀತ್ ಇತರರು ಇದ್ದರು.