

ಹುಬ್ಬಳ್ಳಿ : ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಯಲ್ಲಿ ಯಾವುದೇ ಪ್ರಾದೇಶಿಕ ಭಾಷೆಗೆ ಕೇಂದ್ರ ಸರ್ಕಾರ ಅಡ್ಡಿಪಡಿಸಿಲ್ಲ. ಬದಲಾಗಿ ಸ್ಥಳಿಯ ಭಾಷೆಗಳಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ 2047ರ ವಿಕಸಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಸಾಧ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದ್ದಾರೆ.
ಇಲ್ಲಿಗ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿನ ಮಹಾಮಸ್ತಕಾಭಿಷೇಕ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಯೋಜನಯಲ್ಲಿ ಆಯಾ ರಾಜ್ಯಗಳ ಮಾತೃ ಭಾಷೆಗಳ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಸ್ಥಳಿಯ ಭಾಷೆಯೊಂದಿಗೆ ಭಾವನಾತ್ಮಕತೆ ಬೆಸೆದಿರುತ್ತದೆ. ಗೋವಾದಂತಹ ಸಣ್ಣ ರಾಜ್ಯದಲ್ಲಿಯೂ ಕೊಂಕಣಿ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ಇದರೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಮುಂದಿನ 50 ವರ್ಷಗಳಲ್ಲಿ ಹೊಸ ಅಭಿವೃದ್ಧಿ ಭಾರತ ನಿರ್ಮಾಣಗೊಳ್ಳಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಇದಕ್ಕಾಗಿ ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡಬೇಕು. ಅಂದಾಗ ಮಾತ್ರ ಕೌಶಲ್ಯುತ ಭಾರತ ನಿರ್ಮಾಣಗೊಳ್ಳಲು ಸಾಧ್ಯ ಎಂದು ಹೇಳಿದರು.
ಗೋವಾ ಮತ್ತು ಕರ್ನಾಟಕ ಎರಡೂ ರಾಜ್ಯಗಳಲ್ಲಿ ಅತ್ಯುತ್ತಮ ಬಾಂಧವ್ಯ ಇದೆ. ನಾವು ಎರಡು ಪ್ರತ್ಯೇಕ ರಾಜ್ಯಗಳ ಜನರಾದರೂ, ನಾವೆಲ್ಲರೂ ಭಾರತೀಯರು. ಹಾಗಾಗಿ, ನಮ್ಮಲ್ಲಿ ಸಹೋದರತ್ವದ ಭಾವನೆ ಮತ್ತಷ್ಟು ಬೆಳೆಯಬೇಕು ಎಂದರು.
ಕಳಸಾ-ಬಂಡೂರಿ, ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೋವಾ ಸಿಎಂ, ಸಧ್ಯಕ್ಕೆ ಈ ವಿಷಯ ನ್ಯಾಯಾಲಯದಲ್ಲಿ ಇದೆ. ಹೀಗಾಗಿ, ಈ ವಿಷಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಷ್ಟೇ ಹೇಳಿದರು.