

ರಾಯಚೂರು: ಇಂಡಿಯಾ ಮೈತ್ರಿಕೂಟದಿಂದ ಯಾವ ಪಕ್ಷದ ನಾಯಕರು ಹೊರ ಹೋಗಿಲ್ಲ. ಸೀಟು ಹಂಚಿಕೆಗೆ ಸಂಬಂಸಿದಂತೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಲೋಕಸಭೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ ಸೇರಿದಂತೆ ಮೈತ್ರಿಕೂಟದಲ್ಲಿರುವ ಎಲ್ಲರೂ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವವನ್ನು ಒಪ್ಪಿಕೊಂಡಿದ್ದಾರೆ. ಮೈತ್ರಿಕೂಟದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಚುನಾವಣೆಯಲ್ಲಿ ಸೋತವರಿಗೆ ಎಂಎಲ್ಸಿ ಮಾಡಿದ ಉದಾಹರಣೆಗಳಿಲ್ಲ. ಆದರೆ ಜಗದೀಶ ಶೆಟ್ಟರ್‌ಗೆ ಎಂಎಲ್ಸಿ ಮಾಡುವ ಮೂಲಕ ಪಕ್ಷದಲ್ಲಿ ಗೌರವ ನೀಡಲಾಗಿತ್ತು. ಪಕ್ಷವನ್ನು ಬಿಡುವುದು ಅವರ ವೈಯಕ್ತಿಕ ಅಭಿಪ್ರಾಯ. ರಾಜ್ಯದ ಜನ ಬಿಜೆಪಿಯನ್ನು ಮೂಲೆಗುಂಪು ಮಾಡಿದೆ. ಹೀಗಾಗಿ ಕಾಂಗ್ರೆಸ್ ನಾಯಕರನ್ನು ಸೆಳೆದು ಚುನಾವಣೆ ಎದುರಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ರಾಮಮಂದಿರ ಸ್ಥಾಪನೆಯಿಂದ ರಾಮರಾಜ್ಯ ಸ್ಥಾಪನೆಯಾಗುವುದಿಲ್ಲ. ಉತ್ತಮ ಆಡಳಿತ ನೀಡಿದಾಗ ಮಾತ್ರ ರಾಮರಾಜ್ಯ ಸ್ಥಾಪನೆಯಾಗಲಿದೆ. ಅಕಾರದಲ್ಲಿದ್ದಾಗ ಶೇ.40 ಕಮೀಷನ್ ಪಡೆದು ಆಡಳಿತ ನಡೆಸಿ ರಾಮ ಮಂದಿರ ನಿರ್ಮಿಸಿದರೆ ರಾಮರಾಜ್ಯವಾಗಲು ಸಾಧ್ಯವೇ.
ೆಬ್ರವರಿ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಉದ್ಯೋಗ ಮೇಳ ನಡೆಸಲಾಗುತ್ತಿದೆ. 500 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದು, ಮೇಳದಿಂದ ನಿರುದ್ಯೋಗ ಸಮಸ್ಯೆ ಯಾವ ಮಟ್ಟದಲ್ಲಿದೆ ಎಂದು ಹಾಗೂ ನಿರುದ್ಯೋಗಿಗಳ ಮಾಹಿತಿ ದೊರೆಯಲಿದೆ. ನಗರದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಐಟಿಐ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಮುಖಂಡರಾದ ಕೆ.ಶಾಂತಪ್ಪ, ಮಹ್ಮದ್ ಶಾಲಂ, ಶ್ರೀದೇವಿ ನಾಯಕ, ನಾಗವೇಣಿ ಪಾಟೀಲ್, ಜಿಲ್ಲಾಕಾರಿ ಚಂದ್ರಶೇಖರ ನಾಯಕ, ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಉಪಸ್ಥಿತರಿದ್ದರು.