

ಬೆಳಗಾವಿ : ನಮ್ಮ ದೇಶವನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಹಿಂದುಸ್ತಾನ, ಭಾರತ, ಇಂಡಿಯಾ ಎಂದು ಮೊದಲಿನಿಂದಲೂ ಕರೆಯಲಾಗುತ್ತಿದೆ. ಯುಪಿಎ ಮಿತ್ರಪಕ್ಷಗಳು ಇಂಡಿಯಾ(ಐಎನ್‌ಡಿಐಎ) ಎಂದು ಮರುನಾಮಕರಣ ಮಾಡಿದ್ದರಿಂದಲೇ ದೇಶವನ್ನು ಕೇಂದ್ರ ಸರ್ಕಾರ ಭಾರತ ಎನ್ನುವುದರಲ್ಲಿ ಹುರುಳಿಲ್ಲ. ದೇಶದ ಹೆಸರಲ್ಲಿ ರಾಜಕೀಯ ಯಾರೂ ಮಾಡುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದೊಂದು ಕಾಲದಲ್ಲಿ ಒಂದು ಹೆಸರು ಚಾಲ್ತಿಯಲ್ಲಿವೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ದೇಶವನ್ನು ಇಂಡಿಯಾ ಎಂದು ಮೊದಲಿನಿಂದಲೂ ಗುರುತಿಸುತ್ತಾರೆ. ಮೊದಲಿನಿಂದಲೂ ಕೇಂದ್ರ ಸರ್ಕಾರವನ್ನು ಭಾರತ ಸರ್ಕಾರ ಎಂದೇ ಕರೆಯುತ್ತಿದ್ದೇವೆ. ಇದೀಗ ಮತ್ತೆ ಭಾರತ ಎಂದು ನಾಮಕರಣ ಮಾಡಿದ್ದಾರೆ ಎನ್ನುವುದು ಚರ್ಚೆಯ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸನಾತನ ಧರ್ಮದ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿರುವ ತಮಿಳಾನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಮೈತ್ರಿಕೂಟ ಐಎನ್‌ಡಿಐಎಗೆ ಹಿನ್ನಡೆಯಾಗುತ್ತಿದೆಯೇ? ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಳ್ಳುತ್ತೀರಾ ಎಂಬ ಪ್ರಶ್ನಿಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ ‘ಸ್ಟಾಲಿನ್ ಅವರು ತಮಿಳು ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ. ಸಂಪೂರ್ಣವಾಗಿ ಅರ್ಥವಾಗಿಲ್ಲ. ಪೂರ್ಣ ಹೇಳಿಕೆ ಕನ್ನಡದಲ್ಲಿ ಅನುವಾದ ಮಾಡಿದ ಬಳಿಕವೇ ಈ ಬಗ್ಗೆ ಉತ್ತರಿಸುವೆ’ ಎನ್ನುವ ಮೂಲಕ ಜಾರಿಕೊಂಡರು.