

ಅರಸೀಕೆರೆ: ಜೆಡಿಎಸ್ ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಕೊಡುಗೆ ಏನೆಂಬುದನ್ನು ಜನರು ಮರೆತಿಲ್ಲ. ಎಲ್ಲ ರೀತಿಯ ಸಹಕಾರ ಪಡೆದು ಪಕ್ಷ ಬಿಟ್ಟು ಹೋದವರು, ಚುನಾವಣೆ ಗೆದ್ದವರು ಜೆಡಿಎಸ್ ಮುಗಿಸಲು ಹುನ್ನಾರ ನಡೆಸಿದ್ದಾರೆ. ದೈವ ಬಲ ನಮ್ಮ ಪರ ಇರುವಾಗ ಹೆದರುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಶಕ್ತಿ ಕುಂದಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯವಾಗಿ ಮುಗಿಸಿ ಬಿಡುತ್ತೇವೆ ಎನ್ನುವವರಿಗೆ ಕಾಲವೇ ಉತ್ತರ ಹೇಳಲಿದೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಜಿಲ್ಲೆಯ ಯಾವುದೇ ಯೋಜನೆಗಳಿಗೆ ಅನುದಾನ ಕೊಟ್ಟಿಲ್ಲ ಎಂದು ದೂರುತ್ತಿದ್ದಾರೆ. ರೈಲ್ವೆ ಮೇಲ್ಸೇತುವೆ ಪೂರ್ಣಗೊಳಿಸುವ ಸಂಬಂಧ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಜತೆಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಅಧಿಕಾರಿಗಳು ಯಾರೋ ಹೇಳಿದಂತೆ ಕೇಳಿದರೆ ಸಹಿಸಲಾಗದು. ಪಕ್ಷ ಸಂಘಟನೆ ಮಾಡಲು ಶ್ರಮಿಸುವ ಕಾರ್ಯಕರ್ತರ ಪಡೆಯೇ ನಮ್ಮ ಬಳಿಯಿದೆ. ಸಿಎಂ ಆಗಿದ್ದಾಗ ಕುಮಾರಸ್ವಾಮಿ ಮಾಡಿದ ಅಭಿವೃದ್ಧಿ ಕೆಲಸಮುಂಬರುವ ಸ್ಥಳೀಯ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಏನೇನು ಮಾಡಿದ್ದಾರೆ ಗೊತ್ತಿದೆ. ಜೆಡಿಎಸ್ ಹೊರತು ಪಡಿಸಿ ಜಿಲ್ಲೆಗೆ ಎರಡೂ ಪಕ್ಷಗಳ ಕೊಡುಗೆ ಏನಿದೆ ನೀವೇ ಹೇಳಿ. ಕಳೆದ 10 ವರ್ಷದಿಂದ ನನೆಗುದಿಗೆ ಬಿದ್ದ ಆಸ್ಪತ್ರೆ ಕೆಲಸ ಮಾಡಿದವರು ಯಾರು? ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನಾವು ರಾಜಕೀಯ ಮಾಡುವುದಿಲ್ಲ. ಜನರ ಬೆಂಬಲ, ಆಶೀರ್ವಾದ, ಪ್ರೀತಿ ಸದಾ ನಮ್ಮ ಮೇಲಿದೆ. ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೆ ಹೋಗಲ್ಲ. ಭಗವಂತನ ಆಶೀರ್ವಾದವಿದ್ದು, ಮಾರ್ಚ್‌ನಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳುವ ಮೂಲದ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.
ತಾಪಂ ಮಾಜಿ ಸದಸ್ಯರಾದ ಹೊಸೂರು ಗಂಗಾಧರ್, ಬಸವಲಿಂಗಪ್ಪ, ಮುಖಂಡರಾದ ಕುಡುಕುಂದಿ ಕುಮಾರ್, ರಮೇಶ್, ಯೋಗೀಶ್ ಇತರರಿದ್ದರು.