

ಚಿಕ್ಕಬಳ್ಳಾಪುರ: ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಜನರ ಒಳ್ಳೆಯ ಕೆಲಸ ಮಾಡುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ವರವಣಿಯಲ್ಲಿ ಗ್ರಾಮ ಸಂಚಾರ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕೆಲವರು ಅಧಿಕಾರ ಇಲ್ಲದಿರುವ ಸಂದರ್ಭದಲ್ಲಿ ನಿಯಂತ್ರಿಸಲು ಯತ್ನಿಸಿದರು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ಈಗ ಆಡಳಿತದ ನಿರ್ವಹಣೆಯ ಜವಾಬ್ದಾರಿಯನ್ನು ಹೊರಲಾಗುತ್ತಿದೆ. ಒಂದು ಸಹಿ ಹಾಕಿದರೆ ಸಾಕು ಕೆಲಸವಾಗುತ್ತದೆ. ಇಂತಹ ಸಂದರ್ಭದಲ್ಲಿ ತಡೆಯುವವರು ಯಾರು?. ಮತ್ತೊಮ್ಮೆ ಅವಧಿಗೆ ಮಾತ್ರವಲ್ಲ. ಇದೇ ಮಾತನ್ನು ೨೦ ವರ್ಷ ಧೈರ್ಯವಾಗಿ ಹೇಳುತ್ತೇನೆ, ಎಂದಿಗೂ ಓಲೈಕೆ ರಾಜಕಾರಣ ಮಾಡುವುದಿಲ್ಲ. ಯಾರಿಗೂ ಹೆದರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪೂರ್ಣಿಮಾ, ಗ್ರಾ.ಪಂ.ಸದಸ್ಯ ಬಾಲಕೃಷ್ಣ, ಮುಖಂಡರಾದ ನಂಜುಂಡಪ್ಪ, ಗಂಗಣ್ಣ, ವೆಂಕಟೇಶಪ್ಪ, ಮಾರುತಿ ಮತ್ತಿತರರು ಇದ್ದರು.
*ನಾನೇ ಜೆಸಿಬಿ ತಗೊಂಡು ಬರುವೆ*
ನಗರದ ಬಜಾರ್ ರಸ್ತೆ ಹಾಗೂ ಗಂಗಮ್ಮನಗುಡಿ ರಸ್ತೆ ವಿಸ್ತರಣೆಗೆ ಅಕ್ರಮ ಒತ್ತುವರಿ ತೆರವುಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟವರಿಗೆ ೧೫ ದಿನಗಳವರೆಗೂ ನಿರಂತರವಾಗಿ ಬಾರಿ ಮನವಿ ಮಾಡಲಾಗುತ್ತದೆ. ಮಾತು ಕೇಳದಿದ್ದಲ್ಲಿ ಕಟ್ಟಡಗಳನ್ನು ಹೊಡೆದು ಹಾಕಲಾಗುತ್ತದೆ. ಬೆಳಿಗ್ಗೆಯೇ ಜೆಸಿಬಿ ವಾಹನವನ್ನು ತೆಗೆದುಕೊಂಡು ನಾನೇ ಬರುವೆ ಎಂದು ಶಾಸಕರು ರಸ್ತೆ ವಿಸ್ತರಣೆಯ ವಿರೋಧಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಾಲಯವೇ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಆದೇಶಿಸಿದೆ. ಇದರ ಪಾಲನೆಯಾಗದಿರುವುದೇ ದೊಡ್ಡ ತಪ್ಪು. ಈಗ ಯಾರೂ ದಾವೆ ಹೂಡಲು ಸಾಧ್ಯವಿಲ್ಲ. ಯಾರೂ ಸಹ ಅಂಗಡಿ ಮಾಲೀಕರ ಜಾಗವನ್ನು ವಶಕ್ಕೆ ಪಡೆಯುತ್ತಿಲ್ಲ. ಕೇವಲ ಅಕ್ರಮ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗುತ್ತಿದೆ. ಇದಕ್ಕೆ ಅನೇಕ ವ್ಯಾಪಾರಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.