ಸಂವಿಧಾನ ಅಡಿಪಾಯ ಅಲ್ಲಾಡಿಸಲು ಯಾರಿಂದಲೂ ಸಾಧ್ಯ ಇಲ್ಲ

9
Published on

ಮೈಸೂರು: ಸಂವಿಧಾನ ಬದಲಾವಣೆ ಬಿಜೆಪಿ ಗುರಿಯಾಗಿದೆ. ಆದರೆ ಸಂವಿಧಾನ ಅಡಿಪಾಯ ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಆಶಯದಂತೆ ಅವರ ಹೋರಾಟದ ರಥ ಎಳೆದುಕೊಂಡು ಹೋಗಬೇಕು. ಒಂದು ವೇಳೆ ಆಗದಿದ್ದರೂ ಹಿಂದಕ್ಕೆ ತಳ್ಳಲು ಅವಕಾಶ ನೀಡಬಾರದು. ಸಮಾಜ ಯಾರ ಸ್ವತ್ತಲ್ಲ. ಕಾರ್ಯಕರ್ತರು ನಾಯಕರ ಗುಲಾಮರಾಗದೆ ನಾಯಕರಾಗಲು ಪ್ರಯತ್ನಿಸಬೇಕು. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿಯಿಂದ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಮೈತ್ರಿ ನಾಯಕರೊಬ್ಬರು ಮಹಿಳೆಯರಿಗೆ ಅಪಮಾನ ಮಾಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾದವರಿಗೆ ಇದು ಶೋಭೆ ತರುವುದಿಲ್ಲ. ಇದರಿಂದ ಅವರಿಗೆ ಮಹಿಳೆಯರ ಬಗ್ಗೆ ಎಷ್ಟು ಗೌರವ ಇದೆ ಎನ್ನುವುದು ತಿಳಿಯುತ್ತದೆ ಎಂದು ಕಿಡಿಕಾಡಿದರು.

ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಸಂವಿಧಾನ ಬದಲಾವಣೆಗೆ ಬಿಜೆಪಿ ದೊಡ್ಡ ಹುನ್ನಾರ ನಡೆಸುತ್ತಿದೆ. ಸಂವಿಧಾನ ಅಭದ್ರತೆಯಾಗಿಸಲು ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಂವಿಧಾನ ರಕ್ಷಣೆ ಮಾಡಬೇಕಿದೆ. ನಮ್ಮ ಚುನಾವಣೆಯ ಗೆಲುವು ಸಂವಿಧಾನದ ಗೆಲುವಾಗಲಿದೆ ಎಂದರು.ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಯ್ಯ, ಮರಿತಿಬ್ಬೇಗೌಡ, ಮಾಜಿ ಶಾಸಕ ಡಾ.ಎನ್.ಎಲ್.ಭಾರತಿ ಶಂಕರ್, ಮುಖಂಡರಾದ ವೆಂಕಟೇಶ್, ಆರ್.ಮೂರ್ತಿ, ರಾಜೀವ್, ಶಿವಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net