ಮಹಾತ್ಮ ಗಾಂಧೀಜಿರವರ ತ್ಯಾಗ ಯಾರೂ ಮರೆಯಲಾಗದು: ಡಾ.ಮಂತರ್ ಗೌಡ

2adarshkdag2
Published on

ಮಡಿಕೇರಿ: ಗಾಂಧೀಜಿಯವರ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ವತಿಯಿಂದ ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಹಕಾರದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ ೧೫೪ ನೇ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿರವರ ೧೧೯ನೇ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಮಹಾತ್ಮ ಗಾಂಧೀಜಿರವರ ತ್ಯಾಗವನ್ನು ಯಾರೂ ಮರೆಯುವಂತಿಲ್ಲ. ಮಹಾತ್ಮ ಗಾಂಧೀಜಿರವರ ಜೀವನ ಕುರಿತು ಎಷ್ಟು ಬಾರಿ ಓದಿದರೂ ಗಾಂಧೀಜಿ ಅವರು ಪ್ರತಿಪಾದಿಸಿದ ಜೀವನ ಮೌಲ್ಯ. ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಪ್ರತಿಯೊಬ್ಬರೂ ತಿಳಿಯಬೇಕಿರುವುದು ಬಹಳಷ್ಟು ಇದೆ ಎಂದರು.


ಮಹಾತ್ಮ ಗಾಂಧೀಜಿ ಅವರು ನನ್ನ ಜೀವನವೇ, ನನ್ನ ಸಂದೇಶ ಎಂಬುದನ್ನು ಸಾರಿದರು. ಮಹಾತ್ಮ ಗಾಂಧೀಜಿಯವರ ಸರಳ ಮತ್ತು ಶಾಂತಿಯುತ ಜೀವನವನ್ನು ನಾವೆಲ್ಲರೂ ಅನುಸರಿಸುವಂತಾಗಬೇಕು. ಮಹಾತ್ಮ ಗಾಂಧೀಜಿ ಅವರು ನಡೆದು ಬಂದ ಹಾದಿಯಲ್ಲಿ ಮುನ್ನಡೆಯಬೇಕು ಎಂದರು.


ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಜೈಜವಾನ್ ಜೈಕಿಸಾನ್ ಎಂಬ ಸಂದೇಶ ಸಾರುವ ಮೂಲಕ ರಾಷ್ಟ್ರದಲ್ಲಿ ಸೇನೆ ಹಾಗೂ ಕೃಷಿಯ ಮಹತ್ವದ ಬಗ್ಗೆ ವರ್ಣಿಸಿದ್ದಾರೆ ಎಂದು ಡಾ.ಮಂತರ್ ಗೌಡ ಹೇಳಿದರು.


ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಗಾಂಧೀಜಿ ಅವರ ತತ್ವಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸತ್ಯ, ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸತ್ಯ ಶೋಧನೆಯಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂಬುದನ್ನು ಸಾರಿ ಹೇಳಿದ್ದರು. ಅದರಂತೆ ಸತ್ಯ, ಅಹಿಂಸೆ, ಶಾಂತಿ, ಶಿಸ್ತನ್ನು ಒಳಗೊಂಡಿದ್ದ ಗಾಂಧೀಜಿ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಮುನ್ನಡೆಯಬೇಕು ಎಂದು ಪ್ರತಿಪಾದಿಸಿದರು.


ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಭಾರತಕ್ಕೆ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರು ಇಡೀ ವಿಶ್ವಕ್ಕೆ ಶಾಂತಿಯನ್ನು ಸ್ಥಾಪಿಸಿದ್ದರು. ಮಹಾತ್ಮ ಗಾಂಧೀಜಿ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಾತಂತ್ರ್ಯ ಪಡೆಯಲು ಶ್ರಮಿಸಿದರು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಿದರು ಎಂದರು.


ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಗಾಂಧೀಜಿಯವರ ಜೀವನ ಚರಿತ್ರೆಗಳನ್ನು ಓದಿಕೊಂಡಾಗ ಸತ್ಯ, ಅಹಿಂಸೆ ಮತ್ತು ಸರಳತೆಯ ಬದುಕು ಕಾಣಬಹುದು ಎಂದರು.


ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ ೧೫೪ ನೇ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ರೂ.೩,೦೦೦, ದ್ವಿತೀಯ ರೂ.೨,೦೦೦ ಹಾಗೂ ತೃತೀಯ ರೂ.೧೦೦೦ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು.


ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಣಿ ಮಾಚಯ್ಯ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ಪ್ರವೀಣ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net