

ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಲ್ಲದೆ ಜನರಿಗೆ ತುರ್ತು ಅಗತ್ಯವಿರುವ ಕೆಲಸಗಳಾಗುತ್ತಿಲ್ಲ. ಅಧಿಕೃತವಾಗಿ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿದ್ದರೆ, ನಿಯೋಜನೆಗೊಳ್ಳದವರು ಕೂಡ ‘ಎಲೆಕ್ಷನ್ ಡ್ಯೂಟಿ’ ಹೆಸರಿನಲ್ಲಿ ಕಚೇರಿಗಳಿಗೆ ಹಾಜರಾಗುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ಸಾರ್ವಜನಿಕರಿಗೆ ತುರ್ತು ಅಗತ್ಯದ ಇಲಾಖೆಗಳಾದ ಕಂದಾಯ, ಮಹಾನಗರಪಾಲಿಕೆ, ತಾಲೂಕು ಕಚೇರಿ, ಆರೋಗ್ಯ ಇಲಾಖೆ ಮೊದಲಾದ ಕಚೇರಿಗಳಲ್ಲಿ ಕೆಳ ಹಂತದ ಬೆರಳೆಣಿಕೆಯ ಸಿಬ್ಬಂದಿ ಮಾತ್ರ ಇದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಅಧಿಕಾರಿಗಳು ಇಲ್ಲದೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನು ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗುವ ತನಕ ತಮ್ಮ ಅಗತ್ಯದ ಕೆಲಸಗಳಿಗೆ ಸಾರ್ವಜನಿಕರು ಕಾಯುವುದು ಅನಿವಾರ್ಯ.
ಹೆಚ್ಚಿನ ಅಧಿಕಾರಿಗಳನ್ನು ಫ್ಲೈಯಿಂಗ್ ಸ್ಕ್ವಾಡ್, ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿದೆ. ತುರ್ತು ಕೆಲಸ ಮಾಡಿಸಿಕೊಳ್ಳಲು ಕಚೇರಿಗಳಿಗೆ ಹೋಗುವ ಸಾರ್ವಜನಿಕರನ್ನು ಚುನಾವಣಾ ನೆಪದಲ್ಲಿ ಮರಳಿ ಕಳುಹಿಸಲಾಗುತ್ತಿದೆ. ಹೆಚ್ಚಿನ ಕಚೇರಿಗಳಲ್ಲಿ ಗುತ್ತಿಗೆ ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿರುವುದು ಕಂಡು ಬಂತು. ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಿನಿ ವಿಧಾನಸೌಧ ಮೊದಲಾದ ಪ್ರಮುಖ ಕಚೇರಿಗಳು ಅಧಿಕಾರಿ, ಸಿಬ್ಬಂದಿಗಳಿಲ್ಲದೆ ಖಾಲಿ ಖಾಲಿಯಾಗಿವೆ. ವಿಚಾರಿಸಿದಾಗ ಎಲ್ಲ ಕಚೇರಿಗಳಲ್ಲಿ ‘ಎಲೆಕ್ಷನ್ ಡ್ಯೂಟಿ’ ಎನ್ನುವ ಉತ್ತರ ನೀಡುತ್ತಿದ್ದಾರೆ.
ಪ್ರತಿ ಬಾರಿಯೂ ಚುನಾವಣೆಗಳು ಎದುರಾದ ಸಂದರ್ಭ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಸಾರ್ವಜನಿಕರಿಗೆ ಅನಾನುಕೂಲ ಆಗುತ್ತಿರುವುದು ಸಾಮಾನ್ಯ. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಳಿಸುವಾಗ ಜನರಿಗೆ ಅಗತ್ಯದ ಕಂದಾಯ, ಆರೋಗ್ಯ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಬಿಟ್ಟು ಜನರಿಂದ ದೂರ ಇರುವ ಇಲಾಖೆಗಳಿಂದ ಅಧಿಕಾರಿಗಳನ್ನು ನಿಯೋಜಿಸಬೇಕು. ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಒತ್ತಾಯಿಸಿದ್ದಾರೆ.
ಜನರಿಗಾಗುತ್ತಿರುವ ಸಮಸ್ಯೆ ಏನು?
ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಪೂರೈಕೆಗೆ ವ್ಯವಸ್ಥೆಗಳಾಗುತ್ತಿಲ್ಲ. ಆರ್‌ಟಿಸಿ, ಜಾತಿ, ಆದಾಯ ಪ್ರಮಾಣ ಪತ್ರಗಳು ದೊರಕುತ್ತಿಲ್ಲ. ಪಡಿತರ ಚೀಟಿ ತಿದ್ದುಪಡಿಯಾಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒ, ಕಾರ್ಯದರ್ಶಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ನರೇಗಾ ಕಾಮಗಾರಿಗಳು ಸ್ಥಗಿತಗೊಂಡಿವೆ. ಪಾಲಿಕೆಗಳಲ್ಲಿ ತೆರಿಗೆ ವಸೂಲಾತಿ ಆಗುತ್ತಿಲ್ಲ. ಮುಡಾದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಸಿಗುತ್ತಿಲ್ಲ. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದು ಕಚೇರಿ ಕೆಲಸಗಳೆಲ್ಲಾ ಬಾಕಿಯಾಗುತ್ತಿವೆ. ಮನೆ, ಜಾಗದ ರಿಜಿಸ್ಟ್ರೇಷನ್ ಆಗುತ್ತಿಲ್ಲ. ತಾಲೂಕು, ಜಿಲ್ಲಾ ಮಟ್ಟದಲ್ಲಿನ ಕಂದಾಯ ವ್ಯಾಜ್ಯಗಳು ಸಾಕಷ್ಟು ಪೆಂಡಿಂಗ್ ಇದ್ದು, ವಿಚಾರಣೆಗೆ ಬಂದಿವೆ. ಜನರಿಗೆ ಒಂದು ದಿನದ ಮುಂದೂಡಿಕೆಯು ವರ್ಷಗಳ ಕಾಲ ಕಾಯುವಂತೆ ಮಾಡುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆಗಳ ಮೌಲ್ಯಮಾಪನಕ್ಕೂ ಚುನಾವಣೆ ಬಿಸಿ ತಟ್ಟಿದೆ. ರಾಜ್ಯದಲ್ಲಿ ಶೇ.30ರಷ್ಟು ಮಂದಿ ಉಪನ್ಯಾಸಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವುದರಿಂದ ಮೌಲ್ಯಮಾಪನಕ್ಕೆ ಅನುಭವಿ ಅತಿಥಿ ಉಪನ್ಯಾಸಕರನ್ನು ನಿಯೋಜಿಸಲಾಗುತ್ತಿದೆ.