ನೋ ಎನ್‌ಪಿಎಸ್, ಯುಪಿಎಸ್… ಓನ್ಲಿ ಒಪಿಎಸ್

FotoJet (4)
Published on

ನೂತನ ಪಿಂಚಣಿ ಯೋಜನೆಗೆ ವಿರೋಧ | ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ

ಶಿಡ್ಲಘಟ್ಟ : ರಾಜ್ಯ ಸರ್ಕಾರಿ ನೌಕರರಿಗೆ ಇದೀಗ ಇರುವ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್ ಪಿಂಚಣಿ) ಹಾಗೂ ಯೂನಿಫೈಡ್ ಪೆನ್ಷನ್ ಸ್ಕೀಮ್ (ಯುಪಿಎಸ್ ಪಿಂಚಣಿ ಯೋಜನೆ) ಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿ ಯೋಜನೆ (ಒಪಿಎಸ್ ಯೋಜನೆ)ಯನ್ನು ಮರು ಜಾರಿ ಮಾಡಬೇಕೆಂದು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ ಆಗ್ರಹಿಸಿದರು.
ನಗರದ ತಾಲೂಕು ಕಚೇರಿ ಎದುರು ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ತಹಸೀಲ್ದಾರ್ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಗುರುವಾರ ಮನವಿ ಮಾತನಾಡಿದರು.
ದೇಶಾದ್ಯಂತ ಎನ್‌ಪಿಎಸ್ ವಿರೋಧಿಸಿ ಹಲವು ವರ್ಷಗಳಿಂದ ನೌಕರರು ನಡೆಸಿದ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ಒಪಿಎಸ್ ಜಾರಿಗೊಳಿಸುವ ಬದಲು ಯುಪಿಎಸ್ ಅಂದರೆ ಯೂನಿಫೈಡ್ ಪೆನ್ಷನ್ ಸ್ಕೀಮ್ (ಏಕೀಕೃತ ಪಿಂಚಣಿ ಯೋಜನೆ) ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ಸದರಿ ಯೋಜನೆಯು ಷೇರು ಮಾರುಕಟ್ಟೆ ಆಧಾರಿತವಾಗಿದ್ದು ಸರ್ಕಾರಿ ನೌಕರರ ಸಂಧ್ಯಾ ಕಾಲದ ಬದುಕಿಗೆ ಯಾವುದೇ ಭದ್ರತೆ ಒದಗಿಸುವ ಅಂಶಗಳನ್ನು ಹೊಂದಿಲ್ಲ. ಹಾಗಾಗಿ ಇಂದು ರಾಜ್ಯಾದ್ಯಂತ ನೋ ಎನ್‌ಪಿಎಸ್, ನೋ ಯುಪಿಎಸ್, ಓನ್ಲಿ ಒಪಿಎಸ್ ಶೀರ್ಷಿಕೆಯಡಿ ಒಪಿಎಸ್ ಜಾರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಈ ಹಿಂದೆ ನಮ್ಮ ಸಂಘಟನೆಗೆ ನೀಡಿರುವ ಭರವಸೆಯಂತೆ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್. ಗಜೇಂದ್ರ, ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಟಿ.ಟಿ.ನರಸಿಂಹಪ್ಪ, ಸಹಕಾರ್ಯದರ್ಶಿ ಶಿವಶಂಕರ್, ಜಂಟಿ ಕಾರ್ಯದರ್ಶಿ ಸರಿತ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿ ಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್. ನಾರಾಯಣಸ್ವಾಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಅಕ್ಕಲರೆಡ್ಡಿ ಹಾಗೂ ವಿವಿಧ ಇಲಾಖೆಗಳ ನೌಕರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net