

ಶಿರಸಿ: ಹೊಸ ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ. ಆದರೆ, ಹಿಂದಿನಿಂದ ಜೀವನೋಪಾಯಕ್ಕೆ, ವಾಸ್ತವ್ಯಕ್ಕೆ ಅರಣ್ಯ ಅತಿಕ್ರಮಣ ಮಾಡಿಕೊಂಡು ಬಂದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಗುರುವಾರ ಮಾತನಾಡಿದ ಅವರು, ಅರಣ್ಯ ಸಂರಕ್ಷಣೆ ಆಗಬೇಕು. ಮಾನವ ಸುಖವಾಗಿ ಬಾಳಲು ಅರಣ್ಯ ಸಂಪತ್ತು ಬೆಳೆಯಬೇಕು. ಆದರೆ 40-50 ವರ್ಷದ ಅತಿಕ್ರಮಣಕ್ಕೆ ತೊಂದರೆ ಆಗಬಾರದು. ನಾನು ಸಚಿವನಾಗಿದ್ದಾಗ 27/10/1978 ಕ್ಕಿಂತ ಮೊದಲು ಅತಿಕ್ರಮಣ ಮಾಡಿದ್ದವರಿಗೆ ಸಂರಕ್ಷಣೆ ಕೊಡಲು ಆದೇಶ ಮಾಡಲಾಗಿತ್ತು. ಆದರೆ ಕೆಲ ಅರಣ್ಯ ಅಧಿಕಾರಿಗಳು ಕಾನೂನು ಕೈಗೆ ತೆಗೆದುಕೊಂಡು ಬಸವಳ್ಳಿ, ಹಳಿಯಾಳದಲ್ಲಿ ಅಡಕೆ, ತೆಂಗು ಇತರ ಮರಗಿಡಗಳನ್ನು ತೆಗೆಯಲು ಹೋಗಿದ್ದಾರೆ. ಈತರದ ವರ್ತನೆ ಅರಣ್ಯ ಸಿಬ್ಬಂದಿ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಶಿರಸಿ-ಕುಮಟಾ ರಸ್ತೆ ಕಾಮಗಾರಿ ಆರಂಭವಾಗಿ ಹಲವು ವರ್ಷ ಕಳೆದಿದ್ದರೂ ಇನ್ನೂ ಮುಗಿದಿಲ್ಲ. ರಸ್ತೆ ಬಂದ್ ಮಾಡಿ ಇಷ್ಟು ದಿನವಾದರೂ ಸೇತುವೆ, ರಸ್ತೆ ಯಾವುದೂ ಆಗಿಲ್ಲ. ಇದರಿಂದ ಪ್ರವಾಸಿಗರು ಮತ್ತು ]ೕಸಾಮಾನ್ಯನಿಗೆ ಸಮಸ್ಯೆ ಆಗುತ್ತಿದೆ. ಕಾಮಗಾರಿ ಸಮಯದ ಮಿತಿಯಲ್ಲಿ ಮುಗಿಸಬೇಕು. ಜಿಲ್ಲಾಧಿಕಾರಿ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಇತರ ಅಧಿಕಾರಿಗಳಿಗೆ ಶೀಘ್ರ ಕಾಮಗಾರಿ ಮುಗಿಸುವಂತೆ ಕ್ರಮಕ್ಕೆ ಆಗ್ರಹಿಸುತ್ತೇನೆ. ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಕುಮಟಾ ಉಪವಿಭಾಗಾಧಿಕಾರಿಗಳು ಸ್ವಲ್ಪ ಜಾಗೃತರಾಗಿ ಕೆಲಸ ಮಾಡಬೇಕು. ವಿಳಂಬ ಆಗಿದ್ದು ಸರಿಯಲ್ಲ. ಉಪವಿಭಾಗಾಧಿಕಾರಿಗಳು ಕ್ರಿಯಾಶೀಲರಾಗಿ ತ್ವರಿತ ಕೆಲಸ ಆಗುವಂತೆ ನೋಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ 66 ರ ನಿರ್ಮಾಣ ಜವಾಬ್ದಾರಿ ಹೊತ್ತ ಐ ಆರ್ ಬಿ ಕೆಲಸ ತೃಪ್ತಿ ತರುವಂತಿಲ್ಲ. ಶಿರೂರು ಘಟನೆಯಲ್ಲಿ ಸಂತಸ್ತ್ರರಿಗೆ ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಆಶ್ವಾಸನೆ ನೀಡಿ, ತಾತ್ಕಾಲಿಕ ಪರಿಹಾರ ನೀಡಿ ಮುಗಿಸಿದ್ದಾರೆ. ಜಿಲ್ಲಾಧಿಕಾರಿಗಳು ಐಆರ್ಬಿ ಕಂಪನಿಯ ಅಧಿಕಾರಿಗಳನ್ನು ಕರೆಸಿ ಸಭೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದರು.
ಉಗ್ರರ ಮೇಲೆ ನಮ್ಮ ಸೈನಿಕರ ದಾಳಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಘಳಿಗೆ. ಪಾಕಿಸ್ತಾನಕ್ಕೆ ಶಾಂತಿ, ಸೌಹಾರ್ಧತೆ, ಪ್ರೀತಿ, ವಿಶ್ವಾಸದಲ್ಲಿ ವಿಶ್ವಾಸ ಇಲ್ಲ. ಭಾರತೀಯ ಸೇನೆ ಇಡೀ ದೇಶಕ್ಕೆ ಗೌರವ ಹೆಮ್ಮೆ ತಂದಿದೆ. ಪಾಕಿಸ್ತಾನ ಸರ್ಕಾರ ಎಲ್ಲಿಯ ತನಕ ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಆತಂಕವಾದಿಗಳು ತಮ್ಮ ನೀಚಕೃತ್ಯ ನಿಲ್ಲಿಸುವುದಿಲ್ಲ. ಅಲ್ಲಿಯ ತನಕ ಈ ಅಪರೇಶನ್ ಸಿಂಧೂರ ನಡೆಸಬೇಕಿದೆ. ಈ ಸಂದರ್ಭದಲ್ಲಿ ಎಲ್ಲ ಭಾರತೀಯರು ಧರ್ಮ, ಜಾತಿ, ಪಕ್ಷಬೇಧ ಬಿಟ್ಟು, ಬೆಂಬಲ ಮಾಡಬೇಕು. ನಮ್ಮ ಹೆಣ್ಣುಮಕ್ಕಳ ತ್ಯಾಗದ ಬಗ್ಗೆ ನ್ಯಾಯ ಕೊಡಬೇಕಾಗಿದೆ. . ಆರ್.ವಿ. ದೇಶಪಾಂಡೆ