ಭೂ ದಾಖಲೆಗಳಿಗೆ ಬೈಲಹೊಂಗಲಕ್ಕೆ ಹೋಗಬೇಕಿಲ್ಲ

29kittur 003
Published on

ಚನ್ನಮ್ಮನ ಕಿತ್ತೂರು : ತಾಲೂಕಿನ ಜನರಿಗೆ ಅವಶ್ಯವಾಗಿರುವ ಭೂ ದಾಖಲೆಗಳಿಗೆ, ಇನ್ನು ಬೆಲಹೊಂಗಲಕ್ಕೆ ಹೋಗುವ ಅವಶ್ಯಕತೆಯಿಲ್ಲ. ಮಂಗಳವಾರದಿಂದ ಕಿತ್ತೂರಿನಲ್ಲಿಯೇ ದೊರೆಯಲಿವೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಇಲ್ಲಿಯ ಆಡಳಿತಸೌಧದಲ್ಲಿ ಮಂಗಳವಾರ ಅಭಿಲೇಖಾಲಯ (ರೆಕಾರ್ಡ ಆಫೀಸ್​) ಉದ್ಘಾಟಿಸಿ ಮಾತನಾಡಿದ ಅವರು, ಇಪ್ಪತ್ತು ಮೂವತ್ತು ರೂಪಾಯಿಯ ದಾಖಲಾತಿ ತೆಗೆದುಕೊಳ್ಳಲು ಬೆಲಹೊಂಗಲಕ್ಕೆ ಐದಾರು ನೂರು ಖರ್ಚು ಮಾಡಿಕೊಂಡು ಹೋಗಬೇಕಿತ್ತು, ಇದು ಬಡ ವರ್ಗದ ಜನರಿಗೆ ಕಿರಿಕಿರಿ ಜತೆಗೆ ಆರ್ಥಿಕ ತೊಂದರೆ ಮಾಡುತ್ತಿತ್ತು. ಇನ್ನು ಮುಂದೆ ತಾಪತ್ರಯ ತಪ್ಪಲಿದೆ. ಕಿತ್ತೂರು ತಾಲೂಕಿನ ಎಲ್ಲ ಭೂ ದಾಖಲಾತಿ ಇಲ್ಲೇ ಪಡೆಯಬಹುದಾಗಿದೆ ಎಂದರು.

ಕಿತ್ತೂರು ತಾಲೂಕಿಗೆ ಇನ್ನೂ ಬಹುತೇಕ ಕಚೇರಿಗಳ ಅಗತ್ಯವಿದೆ ಇದರ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಅಲ್ಲಿಯವರೆಗೆ ಕಿತ್ತೂರು ತಾಲೂಕಿನ ಜನರಿಗೆ ತೊಂದರೆಯಾಗದಂತೆ ವಾರಕ್ಕೆ ಎರಡು ಬಾರಿ ಇಲ್ಲಿ ಇಲಾಖಾವಾರು ಅಧಿಕಾರಿಗಳು ಬಂದು ಜನರ ಕುಂದು ಕೊರತೆಗೆ ಪರಿಹಾರ ನೀಡಲಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ ಕಲ್ಲಗೌಡ ಪಾಟೀಲ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯ ಎಂ.ಎ್​. ಜಕಾತಿ, ಇಒ ಅರುಣಕುಮಾರ, ಮುಖಂಡರಾದ ಆಶ್ಪಾಕ ಹವಾಲ್ದಾರ, ಬಸವರಾಜ ಸಂಗೊಳ್ಳಿ, ರಮೇಶ ಮೋಕಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net