

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನು ನಯವಾಗಿಯೇ ನಿರಾಕರಿಸಿದ್ದು, ಈ ಕುರಿತು ಹೊರಡಿಸಿದ ಆದೇಶ ವಾಪಸ್ ಪಡೆಯಲು ಕೋರಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಬಿಎಸ್ವೈ, ನಿಕಟಪೂರ್ವ ಮುಖ್ಯಮಂತ್ರಿಗಳಿಗೆ ನೀಡಲಾಗುವ ಸರ್ಕಾರಿ ಸೌಲಭ್ಯ ಮುಂದುವರಿಸಿರಿ. ಆದರೆ ಸಂಪುಟ ದರ್ಜೆ ಸ್ಥಾನಮಾನ ಬೇಡ ಎಂದು ಹೇಳಿದ್ದಾರೆ.
ನೂತನವಾಗಿ ಪದಾರೋಹಣ ಮಾಡಿದ ಸಿಎಂ ಪದವಿ ಅವಧಿ ಇರುವವರೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲ ಸೌಲಭ್ಯ, ಸ್ಥಾನಮಾನ ಒದಗಿಸಿ ಸರ್ಕಾರ ಶನಿವಾರ ಆದೇಶ ಹೊರಡಿಸಿತ್ತು. ಆರ್ಥಿಕ ಮಿತವ್ಯಯ ಸಾಧಿಸುವ ಪ್ರಯತ್ನದ ನಡುವೆ ಇದೇ ಮೊದಲ ಬಾರಿಗೆ ಮಾಜಿ ಸಿಎಂ ಒಬ್ಬರಿಗೆ ಇಂತಹ ಸ್ಥಾನಮಾನ ಕಲ್ಪಿಸಿದ್ದು ಹುಬ್ಬೇರಿಸುವಂತೆ ಮಾಡಿತ್ತು. ಇದು ಚರ್ಚೆಗೆ ಗ್ರಾಸವಾಗುವ ಮುನ್ನವೇ ಬಿಎಸ್ವೈ ಸ್ವಯಂಪ್ರೇರಿತವಾಗಿ ಸವಲತ್ತು ನಿರಾಕರಿಸಿದ್ದಾರೆ.