ದ.ಕ, ಉಡುಪಿ ಮಸೀದಿಗಳಲ್ಲಿ ನಮಾಜ್ ಇಲ್ಲ

maseedi
Published on

ಮಂಗಳೂರು/ಉಳ್ಳಾಲ/ಉಡುಪಿ: ಸಾಮೂಹಿಕ ನಮಾಜ್ ನಿಷೇಧಿಸಿದ ಸರ್ಕಾರದ ಆದೇಶ ಹಾಗೂ ಖಾಝಿಗಳ ನಿರ್ದೇಶನದಂತೆ ಶುಕ್ರವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಯಾವುದೇ ಮಸೀದಿಗಳಲ್ಲೂ ನಮಾಜ್ ನಡೆಯಲಿಲ್ಲ.

ಹೆಚ್ಚಿನ ಮಸೀದಿಗಳ ಗೇಟುಗಳಿಗೆ ಬೀಗ ಹಾಕಲಾಗಿದ್ದು, ಮಸೀದಿಗಳೂ ಖಾಲಿಯಾಗಿವೆ. ಆಝಾನ್ ಕರೆಗೂ ಕಡಿಮೆ ಧ್ವನಿ ಬಳಸಲಾಗುತ್ತಿದ್ದು, ಕೆಲವು ಮಸೀದಿಗಳಲ್ಲಿ ಆಝಾನ್‌ನಲ್ಲೂ ಬದಲಾವಣೆಯಾಗಿದೆ. ಸರ್ಕಾರದ ಮುಂದಿನ ಆದೇಶವರೆಗೆ ಸಾಮೂಹಿಕ ನಮಾಜ್ ನಡೆಯುವುದಿಲ್ಲ ಎನ್ನುವ ಫಲಕವನ್ನು ಮಸೀದಿಗಳಲ್ಲಿ ಅಳವಡಿಸಲಾಗಿದೆ. ಜನರು ಮಸೀದಿಗೆ ಬರುವ ಬದಲು ಮನೆಯಲ್ಲೇ ನಮಾಜ್ ನಿರ್ವಹಿಸುವಂತೆ ಕರೆ ನೀಡಲಾಗಿದೆ. ಈ ಬಗ್ಗೆ ಗೊತ್ತಿಲ್ಲದವರು ಶುಕ್ರವಾರ ಮಸೀದಿಗಳಿಗೆ ತೆರಳಿ ಗೇಟ್‌ಗಳಲ್ಲಿ ಅಳವಡಿಸಲಾದ ಸೂಚನೆ ಓದಿ ಹಿಂದಿರುಗುತ್ತಿರುವುದು ಕಂಡುಬಂತು.

ಮನೆಯಲ್ಲೇ ನಮಾಜ್: ಮುಸ್ಲಿಮರು ಪ್ರತಿ ಶುಕ್ರವಾರ ಮಸೀದಿಯಲ್ಲಿ ಜುಮಾ ನಮಾಜ್ ಮಾಡುವುದು ಕಡ್ಡಾಯ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಶುಕ್ರವಾರ ಬಾಂಗ್ ಮೊಳಗಿದ ಬಳಿಕ ಮನೆಯಲ್ಲೇ ಲುಹರ್ ನಮಾಜ್ ನೆರವೇರಿಸಿದರು.

ಎಷ್ಟೇ ಕಷ್ಟವಿದ್ದರೂ ನೂರಾರು ಮಂದಿ ಆಯಾ ಮಸೀದಿಗಳಲ್ಲಿ ಶುಕ್ರವಾರ ಮಧ್ಯಾಹ್ನ ಜುಮಾ ನಮಾಜ್ ನಿರ್ವಹಿಸುತ್ತಾರೆ. ನಮಾಜ್‌ಗೂ ಮುನ್ನ ಖುತ್ಬಾ ಪಾರಾಯಣ ಮಾಡಲಾಗುತ್ತದೆ. ಅದನ್ನು ಆಲಿಸಿ, ನಮಾಜ್ ನಿರ್ವಹಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ಎಲ್ಲರೂ ವಿರಮಿಸುತ್ತಾರೆ. ಅದೆಷ್ಟೋ ವರ್ಷದ ಬಳಿಕ ಮುಸ್ಲಿಮರು ಜುಮಾ ನಮಾಜ್ ಇಲ್ಲದೆ ಶುಕ್ರವಾರವನ್ನು ಕಳೆದಿದ್ದಾರೆ.

ಶುಕ್ರವಾರ ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಸಾಮೂಹಿಕ ನಮಾಜ್‌ಗೆ ನಿರ್ಬಂಧ ಹೇರಿದ ಪರಿಣಾಮ ಮಸೀದಿಗಳಲ್ಲಿ ಬಾಂಗ್ (ಆಝಾನ್)ನ ಕರೆ ಮಾತ್ರ ಕೇಳಿಸಿತ್ತು. ಸಾಮಾನ್ಯವಾಗಿ ದಿನದ ಐದು ಬಾರಿಯ ಆಝಾನ್ ಕರೆಯಲ್ಲಿ ‘ಮಸೀದಿಗೆ ಬನ್ನಿ- ನಮಾಜ್ ಮಾಡಿ’ ಎಂದು ಹೇಳುತ್ತಿದ್ದರೆ ಈಗ ಆಝಾನ್‌ನ ಕರೆಯಲ್ಲಿ ‘ಮನೆಯಲ್ಲೇ ನಮಾಜ್ ಮಾಡಿ’ ಎಂದು ಹೇಳಲಾಗುತ್ತಿದೆ. ಮಾರ್ಚ್ 13ರಂದು ಶುಕ್ರವಾರದ ಜುಮಾ ನಮಾಜ್‌ನಲ್ಲಿ ನಾಝಿಲತ್ ಕುನೂತ್ ಪಠಿಸಲಾಗಿದ್ದರೆ, ಮಾರ್ಚ್ 20ರ ಶುಕ್ರವಾರದ ಜುಮಾ ನಮಾಜ್- ಪ್ರಾರ್ಥನೆಯನ್ನು ಚುಟುಕುಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net