ವಾತ್ಸಲ್ಯಧಾಮದ ಮೀರಾತಾಯಿ ಕೊಪ್ಪಿಕರ ಇನ್ನಿಲ್ಲ : ಗಾಂಧಿ, ಆಚಾರ್ಯ ವಿನೊಭಾ ಭಾವೆ ಅನುಯಾಯಿ

Meeratayi Koppikar
ಮೀರಾತಾಯಿ ಕೊಪ್ಪಿಕರ
Published on

ಮುಧೋಳ (ಬಾಗಲಕೋಟೆ ಜಿಲ್ಲೆ) : ನಗರ ಹೊರವಲಯದಲ್ಲಿರುವ ವಾತ್ಸಲ್ಯಧಾಮದ ಮೀರಾತಾಯಿ ಕೊಪ್ಪಿಕರ (96) ಶುಕ್ರವಾರ ಬೆಳಗ್ಗೆ ನಿಧನರಾದರು.

ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕುಟುಂಬದ ಶ್ರೀಮಂತಿಕೆ ತೊರೆದು ಗಾಂಧೀಜಿ ಪ್ರತಿಪಾದಿಸಿದ ಸ್ವಇಚ್ಛೆಯ ಬಡತನದ ವಿಚಾರ ಒಪ್ಪಿಕೊಂಡು ವಾತ್ಸಲ್ಯಧಾಮದಲ್ಲಿ ಆಶ್ರಯ ಪಡೆದು ಸರಳ ಜೀವನ ನಡೆಸಿ ಸುದೀರ್ಘ ಕಾಲ ಬದುಕಿದ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.

ಬಾಲ್ಯದಲ್ಲಿ ಮಹಾತ್ಮ ಗಾಂಧೀಜಿಯ ರಾಷ್ಟ್ರೀಯ ವಿಚಾರಗಳಿಗೆ ಆಕರ್ಷಿತರಾಗಿ ಆಚಾರ್ಯ ವಿನೋಭಾ ಭಾವೆ ಅವರ ಸರ್ವೋದಯ ತತ್ವಗಳನ್ನು ಮೊದಲು ತಾವು ಅನುಸರಿಸಿ, ಬೇರೆಯವರೂ ಅವುಗಳನ್ನು ಅನುಸರಿಸುವಲ್ಲಿ ಪ್ರೇರಣೆ ನೀಡಿ ಮೀರಾತಾಯಿ ಕೊಪ್ಪಿಕರ ದೇಶಪ್ರೇಮ ಮೆರೆದಿದ್ದಾರೆ.

ಧಾರವಾಡದ ಖಾದಿಧಾರಿ ಶ್ರೀಪಾದರಾವ್ ಕೊಪ್ಪಿಕರ ಹಾಗೂ ಸುಮತಿಬಾಯಿ ಅವರ ಪ್ರೀತಿಯ ಕುವರಿಯಾಗಿ ಮೀರಾ ಅವರು 1928 ಫೆಬ್ರವರಿ 22 ರಂದು ಜನಿಸಿದರು. ವ್ಯಾಪಾರ ವೃತ್ತಿ ಹೊಂದಿದ, ಪ್ರತಿಷ್ಠಿತ ಮನೆತನದಲ್ಲಿ ಜನಿಸಿದ ಮೀರಾತಾಯಿ ಮೆಟ್ರಿಕ್‌ವರೆಗೆ ಧಾರವಾಡದಲ್ಲಿ ಶಿಕ್ಷಣ ಪೂರೈಸಿದ್ದಾರೆ. 1951ರಲ್ಲಿ ಆಚಾರ್ಯ ವಿನೋಭಾ ಭಾವೆ ಅವರ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಭೂದಾನ ಚಳವಳಿಯಲ್ಲಿ ಮೀರಾತಾಯಿ ಭಾಗವಹಿಸಿದ್ದರು. 1958ರಲ್ಲಿ ರಾಜ್ಯಾದ್ಯಂತ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿ ಭೂದಾನ ಚಳವಳಿ ಯಶಸ್ವಿಯಾಗುವಲ್ಲಿ ವಿಶೇಷ ಶ್ರಮವಹಿಸಿದ್ದರು. ವಿನೋಭಾ ಭಾವೆ ಅವರೊಂದಿಗೆ ಚನ್ನಮ್ಮ ಹಳ್ಳಿಕೇರಿ ಮತ್ತು ಮೀರಾತಾಯಿ ಹತ್ತು ವರ್ಷ ಪಾದಯಾತ್ರೆಯಲ್ಲಿ ಭಾಗವಹಿಸಿ ಇಡೀ ಭಾರತವನ್ನು ಸಂಚರಿಸಿದ್ದರು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಕುಂಬಿಯಲ್ಲಿ ಸರ್ವೋದಯ ಆಶ್ರಮ ಸ್ಥಾಪಿಸಲು ಮೀರಾತಾಯಿ ಅವರಿಗೆ ಭೂದಾನ ಚಳವಳಿ ಸ್ಫೂರ್ತಿದಾಯಕವಾಗಿತ್ತು.

ಆಚಾರ್ಯ ವಿನೋಭಾ ಭಾವೆ ಅವರು ಮಹಿಳೆಯರ ಉನ್ನತಿಗಾಗಿ ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಪವನಾರದಲ್ಲಿ 1959ರಲ್ಲಿ ಬ್ರಹ್ಮವಿದ್ಯಾಮಂದಿರ ಸ್ಥಾಪನೆ ಮಾಡಿದಾಗ ಅಲ್ಲಿಗೆ ತೆರಳಿ ಹನ್ನೆರಡು ವರ್ಷ ಮೀರಾತಾಯಿ ಸೇವೆ ಮಾಡಿದರು. ಈ ಆಶ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದುವಲ್ಲಿ ಮೀರಾತಾಯಿ ಅವರ ಪಾತ್ರ ಮಹತ್ವದ್ದಾಗಿದೆ.ಅಪಾರ ಸಂಪತ್ತಿನ ಒಡೆತನಕ್ಕೆ ಸರ್ಕಾರ ನಿಯಂತ್ರಣ ಹೇರಬೇಕು. ಊಳುವವನಿಗೆ ಭೂಮಿ ಒಡೆತನ ಹೊಂದುವ ಅವಕಾಶ ಇರಬೇಕು ಎನ್ನುವ ಮೀರಾತಾಯಿ ಕೊಪ್ಪಿಕರ ಗಟ್ಟಿ ಧ್ವನಿ ಕಾಲದೊಂದಿಗೆ ಲೀನವಾಗಿದೆ.

ವಾತ್ಸಲ್ಯಧಾಮಕ್ಕೆ ಬಂದು ಗೌರವಿಸಿದ್ದ ಸರ್ಕಾರ

ಆಚಾರ್ಯ ವಿನೋಭಾ ಭಾವೆ ಅವರ ತಾಯಿಯ ತವರೂರು ಜಮಖಂಡಿ. ತಮ್ಮ ತಾಯಿ ಸ್ಮರಣಾರ್ಥ ಆಶ್ರಮವೊಂದನ್ನು ಸ್ಥಾಪಿಸುವ ಕನಸು ಅವರಿಗೆ ಇತ್ತು. ಮಹಾಲಿಂಗಪುರ-ಮುಧೋಳ ರಸ್ತೆಯ ಮಧ್ಯದಲ್ಲಿ ಎರಡು ಎಕರೆ 20 ಗುಂಟೆ ಭೂಮಿಯಲ್ಲಿ ವಾತ್ಸಲ್ಯಧಾಮ ಸ್ಥಾಪಿಸಿ ವಿನೋಭಾ ಭಾವೆ ಅವರ ಕನಸನ್ನು ಮೀರಾತಾಯಿ ನನಸಾಗಿಸಿದ್ದಾರೆ. 1983ರಿಂದ ಇಂದಿಗೂ ಈ ಆಶ್ರಮ ಸರ್ವೋದಯದ ತತ್ವಗಳಾದ ಸಾವಯವ ಕೃಷಿ, ಶ್ರಮದಾನ, ಖಾದಿ ಪ್ರಚಾರ, ಸ್ವಾವಲಂಬಿ ಜೀವನ, ವ್ಯಸನಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಕಾಯಕಯೋಗಿಣಿ ಎಂದಿಗೂ ಪ್ರಚಾರ ಬಯಸಲಿಲ್ಲ. ಸಾವಯವ ಕೃಷಿ ಜೀವನಕ್ಕಾಗಿ ರಾಜ್ಯ ಸರ್ಕಾರವೇ ಆಶ್ರಮಕ್ಕೆ ಬಂದು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಾತ್ಸಲ್ಯ ಧಾಮಕ್ಕೆ ಭೇಟಿ ನೀಡಿ ಅವರನ್ನು ಸನ್ಮಾನಿಸಿದ್ದರು. ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನು ಬಡ ಮಹಿಳೆಯರಿಗೆ ಹಂಚಿದ್ದಾರೆ. ಸ್ವಂತಕ್ಕೆ ಬಳಸಿಕೊಂಡಿಲ್ಲ ಎಂಬುದು ವಿಶೇಷ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ 5ನೇ ಘಟಿಕೋತ್ಸವದಲ್ಲಿ ಮೀರಾತಾಯಿಗೆ ಗೌರವ ಡಾಕ್ಟರೇಟ್ ನೀಡಿದೆ. ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2020ರಲ್ಲಿ ಮೀರಾತಾಯಿ ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net