ಬೇಡ ಜಂಗಮರು ಈಗ ಇಲ್ಲ, ಎಸ್‌ಸಿ ಪಟ್ಟಿಯಿಂದ ಆ ಪದ ತೆಗೆದುಹಾಕಿ, ಸರ್ಕಾರಕ್ಕೆ ಎಚ್. ಆಂಜನೇಯ ಒತ್ತಾಯ

Aanjaneya
Published on

ವಿಜಯಪುರ: ಬೇಡ ಜಂಗಮರು ಈಗ ಇಲ್ಲವೇ ಇಲ್ಲ, ಹೀಗಾಗಿ ಪರಿಶಿಷ್ಟ ಜಾತಿಯ ಪಟ್ಟಿಯಿಂದ ಆ ಪದ ತೆಗೆದುಹಾಕುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.

ಪರಿಶಿಷ್ಟ ಜಾತಿಯ ಸಮೀಕ್ಷೆಯಲ್ಲಿ ಬೇಡ ಜಂಗಮ ಎಂದು ಕೆಲವರು ನಕಲಿ ದಾಖಲೆ ನೀಡುತ್ತಿರುವುದು ಕಂಡು ಬಂದಿದೆ. ಅಸಲಿಗೆ ಬೇಡ ಜಂಗಮರು ಇಲ್ಲವೇ ಇಲ್ಲ. ಈ ಹಿಂದೆ ಬೇಟೆಯಾಡಿಕೊಂಡು ಇದ್ದ ಬೇಡ ಜಂಗಮರು ಮಾಂಸಾಹಾರಿಗಳಾಗಿದ್ದರು. ಆ ಜನಾಂಗ ಈಗ ನಶಿಸಿ ಹೋಗಿದೆ ಎಂದು ಗುರುವಾರ ಸುದ್ದಿಗೋಷ್ಟಿಯಲ್ಲಿ ಅವರು ತಿಳಿಸಿದರು.

ಬುಡ್ಗ ಜಂಗಮದ ಕೆಲವು ಕುಟುಂಬಗಳಿವೆ. ಅವರು ಮೀಸಲಾತಿ ಸೌಲಭ್ಯ ಪಡೆಯಬಹುದು. ಸರ್ಕಾರ ಕೂಡಲೇ ಬೇಡ ಜಂಗಮ ಪದವನ್ನು ಪರಿಶಿಷ್ಟರ ಪಟ್ಟಿಯಿಂದಲೇ ತೆಗೆದು ಹಾಕಬೇಕು. ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದರು.

ಒಳಮೀಸಲಾತಿ ಜಾರಿ ಹಿನ್ನೆಲೆ ನಡೆಯುತ್ತಿರುವ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರು ತಪ್ಪದೇ ಪಾಲ್ಗೊಳ್ಳಬೇಕು. ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ಆರಂಭಗೊಂಡಿದೆ. ಮೇ 25ರವರೆಗೆ ಕಾಲಮಿತಿ ವಿಸ್ತರಿಸಲಾಗಿದೆ. ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರಿಗೆ ತಪ್ಪದೇ ಮಾಹಿತಿ ನೀಡಬೇಕು. ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಯವರು ಸ್ವಯಂಪ್ರೇರಿತವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದರು.

ಜೂನ್‌ನಲ್ಲಿ ಸಿದ್ದರಾಮಯ್ಯ ಒಳಮೀಸಲಾತಿ ಜಾರಿ ಮಾಡಲಿದ್ದಾರೆ. ವಿಳಂಬಕ್ಕೆ ಅವಕಾಶವೇ ಇಲ್ಲ. ಯಾರೇ ಬೇಡವೆಂದರೂ ಜಾರಿಗೊಳಿಸುವುದಾಗಿ ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆಂದು ಆಂಜನೇಯ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net