ಇನ್ಮುಂದೆ ಹಾರ-ತುರಾಯಿ ಸನ್ಮಾನ ಬೇಡ; ಸಚಿವ ಎಂ.ಬಿ. ಪಾಟೀಲ

KAMBAGI SCHOOL
ಬಬಲೇಶ್ವರ ತಾಲೂಕಿನ ಕಂಬಾಗಿ ಗ್ರಾಮದಲ್ಲಿ ಪಿಎಂ ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿಗಳನ್ನು ಸಚಿವ ಎಂ. ಬಿ. ಪಾಟೀಲ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು. ಅಪ್ಪುಗೌಡ ಪಾಟೀಲ ಶೇಗುಣಸಿ, ಸಂಗಮೇಶ ಬಬಲೇಶ್ವರ ಮತ್ತಿತರರಿದ್ದಾರೆ.
Published on

ವಿಜಯಪುರ: ಇನ್ಮುಂದೆ ಕಾರ್ಯಕ್ರಮಗಳಲ್ಲಿ ಹಾರ, ಶಾಲು, ಸನ್ಮಾನ ಬೇಡ. ಇದಕ್ಕೆ ಖರ್ಚು ಮಾಡುವ ಹಣವನ್ನು ಬಡವರಿಗೆ ಸಹಾಯ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ತಾಲೂಕಿನ ಕಂಬಾಗಿ ಮತ್ತು ಬೋಳಚಿಕ್ಕಲಕಿ ಗ್ರಾಮಗಳಲ್ಲಿ ಶನಿವಾರ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಂಬಾಗಿಯಲ್ಲಿ ಪಿಎಂ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿಗಳನ್ನು ಉದ್ಘಾಟಿಸಿ, ಸನ್ಮಾನ ಮಾಡಿಕೊಳ್ಳುತ್ತಿರುವುದು ಇದು ಕೊನೆಯ ಕಾರ್ಯಕ್ರಮ. ಇನ್ನು ಮುಂದೆ ಸನ್ಮಾನ ಬೇಡ ಎಂದು ಡಿಸಿ ಮೂಲಕ ಆದೇಶ ಮಾಡಿಸುವೆ. ಸನ್ಮಾನದ ಹಾರ, ಶಾಲು, ತುರಾಯಿ ಹಣವನ್ನು ಬಡವರಿಗೆ ಸಹಾಯ ಮಾಡಿ. ಸಿದ್ಧೇಶ್ವರ ಸ್ವಾಮೀಜಿ ಎಂದೂ ಹಾರ ಹಾಕಿಸಿಕೊಳ್ಳಲಿಲ್ಲ. ಪಾದಗಳಿಗೆ ನಮಸ್ಕಾರ ಮಾಡಿಸಿಕೊಳ್ಳಲಿಲ್ಲ. ಅವರು ನಮಗೆ ಆದರ್ಶರಾಗಿದ್ದಾರೆ. ಸನ್ಮಾನ ಕಾರ್ಯಕ್ರಮದಿಂದಗಾಗಿ ಸಮಯವೂ ವ್ಯಯವಾಗುತ್ತದೆ. ಅದರ ಬದಲು ಒಂದು ಪುಸ್ತಕ ಕೊಟ್ಟರೆ ಸಾಕು ಎಂದು ಹೇಳಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ನಾವು 3000 ಗುಡಿ-ಗುಂಡಾರಗಳಿಗೆ ಅನುದಾನ ನೀಡಿದ್ದೇವೆ. ಇದೇ ಹಣವನ್ನು ಬಳಸಿ ಇಡೀ ಮತ ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸಬಹುದಾಗಿತ್ತು. ಶಾಲೆಯೇ ದೇವಸ್ಥಾನ, ಮಕ್ಕಳೇ ದೇವರು ಎಂದು ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ. ಬೆಂಗಳೂರಿನಲ್ಲಿರುವ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ನಮ್ಮ ಮತಕ್ಷೇತ್ರದಲ್ಲಿರುವ ಯೂ ಸರ್ಕಾರಿ ಶಾಲೆಗಳಲ್ಲಿ ಸುಮಾರು ರೂ. 100 ಕೋಟಿ ಸಿಎಸ್‌ಆರ್ ಫಂಡ್ ಬಳಸಿ ಶಾಲಾ ಕೊಠಡಿಗಳು, ಶೌಚಗೃಹ, ಕುಡಿಯಲು ನೀರಿನ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್, ವಾಚನಾಲಯ, ಕ್ರೀಡಾ ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಬಳಸಲಾಗುವುದು. ಇದರಿಂದ ಗ್ರಾಮೀಣ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

ಪಾಠ ಮಾಡುವ ಶಿಕ್ಷಕರೂ ಕಾಲಕ್ಕೆ ತಕ್ಕಂತೆ ಜ್ಞಾನಾರ್ಜನೆ ಮಾಡಬೇಕು. ಅಂತರ್ಜಾಲದ ಸದುಪಯೋಗ ಪಡಿಸಿಕೊಂಡು ಅಪಡೇಟ್ ಆಗಬೇಕು. ಈಗ ಕೃತಕ ಬುದ್ಧಿಮತ್ತೆ ಕಾಲ ಪ್ರಾರಂಭವಾಗಿರುವುದರಿಂದ ಶಿಕ್ಷಕರು ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ, ನಿಮ್ಮ ಮಕ್ಕಳಿಗೂ ಒಳ್ಳೆಯದಾಗಲಿದೆ. ಗ್ರಾಮದ ಹಿರಿಯರು, ಯುವಕರು ರಾಜಕಾರಣ ಮತ್ತು ಜಾತಿಯನ್ನು ಕಂಪೌಂಡ್ ಹೊರಗಿಡಬೇಕು. ರಾಜಕೀಯ ಪ್ರತಿಷ್ಠೆ ಬದಿಗಿಡಬೇಕು. ಅರಮನೆಯಲ್ಲಿರುವ ಶಾಲೆಗಿಂತ, ಗುಡಿಸಲಿನಲ್ಲಿ ಉತ್ತಮ ಶಿಕ್ಷಕರಿಂದ ಕೂಡಿರುವ ಬೋಧನೆ ಅಗತ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳಲ್ಲಿ ದೇವರನ್ನು ಕಾಣುವ ಸಚಿವ ಎಂ. ಬಿ. ಪಾಟೀಲ ಅವರು ಈಗ ತಮ್ಮ ಅನುದಾನವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ನೀಡುತ್ತಿರುವುದು ಮಕ್ಕಳ ಪಾಲಿಗೆ ವರದಾನವಾಗಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಹಸನಸಾಬ ಹಳಬರ, ಗ್ರಾಪಂ ಅಧ್ಯಕ್ಷೆ ಕವಿತಾ ಮಲ್ಲಯ್ಯ ಮಠಪತಿ, ಮುಖಂಡರಾದ ಈರಗೊಂಡ ಬಿರಾದಾರ, ಅಪ್ಪುಗೌಡ ಪಾಟೀಲ ಶೇಗುಣಸಿ, ಕೆ.ಎಚ್. ಮುಂಬಾರೆಡ್ಡಿ, ಮುತ್ತಪ್ಪ ಶಿವಣ್ಣವರ, ಪ್ರಕಾಶ ಸೊನ್ನದ, ಮಹಾದೇವ ಮದರಖಂಡಿ, ರಮೇಶ ಬಡ್ರಿ, ಶೇಖಪ್ಪ ಚಿಕ್ಕಗಲಗಲಿ, ರಂಗನಗೌಡ ಬಿರಾದಾರ, ಮಲ್ಲು ದಳವಾಯಿ, ಡಿಡಿಪಿಐ ಎನ್.ಎಚ್. ನಾಗೂರ, ವಿಜಯಪುರ ಗ್ರಾಮೀಣ ಬಿಇಒ ಪ್ರಮೋದಿನಿ ಬಳೂಲಮಟ್ಟಿ, ಮಲ್ಲಿಕಾರ್ಜುನ ಅಂಗಡಿ, ಮಾರುತಿ ಕೊಪ್ಪದ, ಉಮೇಶ ಮಲ್ಲಣ್ಣವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net