

ಶಿವಮೊಗ್ಗ: ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರಕ್ಕೆ ಐದು ಗ್ಯಾರಂಟಿಗಳಿಗೆ ಕೊಡುವುದಕ್ಕೂ ಹಣವಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ದೂರಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ದಲಿತರ ಹಣ, ಮೂಡಾ ನಿವೇಶನಗಳನ್ನು ನುಂಗಿ, ಘನವೆತ್ತ ರಾಜ್ಯಪಾಲರಿಗೆ ಅವಮಾನ ಮಾಡುತ್ತಿರುವ ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಕ್ಕೆ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ನೋಡುತ್ತಿರುವ ಜಿಲ್ಲಾಧಿಕಾರಿ, ಪೊಲೀಸರಿಗೆ ಏನೂ ಅನ್ನಿಸುವುದಿಲ್ಲವೇ ?, ಡಿಸಿ ಕಚೇರಿ ಎದುರೇ ರಾಜ್ಯಪಾಲರ ಫೋಟೊಗೆ ಸುಟ್ಟು ಹಾಕಿದರೂ ಒಂದೇ ಒಂದು ಎಫ್‌ಐಆರ್ ಮಾಡಲಿಲ್ಲ. ರಾಜ್ಯಪಾಲರಿಗೆ ಅಪಮಾನ ಮಾಡಿದವರನ್ನು ಒದ್ದು ಜೈಲಿಗೆ ಹಾಕಬೇಕಿದ್ದ ಪೊಲೀಸರು ಕಾಂಗ್ರೆಸ್‌ನ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಕೆಲವೇ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಶಿಕ್ಷಣ ಸಚಿವರಿಗೆ ಘೇರಾವ್ ಹಾಕಿದಾಗ ರಕ್ಷಣಾ ಇಲಾಖೆ ಹೇಗೆ ನಡೆದುಕೊಂಡಿತ್ತು. ಕುವೆಂಪು ವಿವಿಯಲ್ಲಿ ರಾಜ್ಯಪಾಲರು ಬಂದಾಗ ಹೇಗೆ ನಡೆದುಕೊಂಡರು ಎಂಬುದು ಗೊತ್ತಿದೆ. ಪೊಲೀಸರು ಕಾಂಗ್ರೆಸ್‌ನ ಏಜೆಂಟರಂತೆ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.