

ಮಂಗಳೂರು: ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವ ಕಾನೂನಿನ ಪ್ರಕಾರ ಟ್ಯಾಕ್ಸಿ, ಆಟೋರಿಕ್ಷಾಗಳಿಗೆ ಬ್ಯಾಡ್ಜ್ ನಂಬರ್ ಕಡ್ಡಾಯವಲ್ಲ. ಆದರೆ ರಾಜ್ಯ ಸರ್ಕಾರ ಘೋಷಿಸಿದ ಕೋವಿಡ್ ಪರಿಹಾರ ಪಡೆಯಬೇಕಿದ್ದರೆ ಆಟೋರಿಕ್ಷಾ, ಟ್ಯಾಕ್ಸಿ ಚಾಲಕರು ಸೇವಾಸಿಂಧು ವೆಬ್‌ಪೋರ್ಟಲ್‌ನಲ್ಲಿ ಬ್ಯಾಡ್ಜ್ ನಂಬರ್ ಕಡ್ಡಾಯ ನಮೂದಿಸಬೇಕು. ಬ್ಯಾಡ್ಜ್ ನಂಬರ್ ರದ್ದಾಗಿರುವಾಗ ನಾವು ಪರಿಹಾರ ಪಡೆಯುವುದಾದರೂ ಹೇಗೆ ಎನ್ನುವುದು ಅನೇಕರ ಪ್ರಶ್ನೆ.
ಕೆಲವು ವರ್ಷಗಳ ಹಿಂದೆಯೇ ಟ್ಯಾಕ್ಸಿಯಿಂದ ಮೇಲಿನ ಅಂದರೆ ಬಸ್, ಲಾರಿ, ಟಿಪ್ಪರ್‌ನಂಥ ವಾಹನಗಳಿಗೆ ಮಾತ್ರ ಬ್ಯಾಡ್ಜ್ ಇದ್ದರಾಯಿತು, ಅದಕ್ಕಿಂತ ಕೆಳಗಿನ ವರ್ಗದ ವಾಹನಗಳಿಗೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿತ್ತು. ಆ ಬಳಿಕ ಕೇಂದ್ರ ಭೂ ಸಾರಿಗೆ ಸಚಿವಾಲಯವೂ ಬ್ಯಾಡ್ಜ್ ಕಡ್ಡಾಯವಲ್ಲ ಎಂದು ನಿಯಮ ತಿದ್ದುಪಡಿ ಮಾಡಿದೆ. ಹಾಗಿರುವಾಗ ರಾಜ್ಯ ಸರ್ಕಾರ ಪರಿಹಾರ ಪಡೆಯಲು ಬ್ಯಾಡ್ಜ್ ಬೇಕು ಎಂದಿರುವುದು ನಮಗೆ ಆಗಿರುವ ಅನ್ಯಾಯ ಎಂದು ಆಟೋ ಚಾಲಕರು ಹೇಳುತ್ತಾರೆ. ಸದ್ಯ ನಿಯಮ ಪ್ರಕಾರ, ಕಾರು ಚಾಲನಾ ಪರವಾನಗಿ ಇದ್ದರೆ ಬ್ಯಾಡ್ಜ್ ಬೇಕಿಲ್ಲ. ಆತ ಟ್ಯಾಕ್ಸಿ ಅಥವಾ ರಿಕ್ಷಾ ಚಲಾಯಿಸಲು ಅಡ್ಡಿಯಿಲ್ಲ.
ಕಳೆದ ವರ್ಷವೂ ಇತ್ತು: ಕಳೆದ ವರ್ಷ ಕೋವಿಡ್ ಮೊದಲ ಅಲೆ ವೇಳೆ ಪರಿಹಾರ ಪಡೆಯುವಾಗಲೂ ಇದೇ ನಿಯಮವಿತ್ತು. ಆದರೆ ಆಗ ಹೆಚ್ಚು ಚಾಲಕರಿಗೆ ಸಮಸ್ಯೆಯಾಗಿರಲಿಲ್ಲ. ಕಾರಣವೆಂದರೆ ಆಗ ಬಹುತೇಕ ಚಾಲಕರಿಗೆ ಪರವಾನಗಿ ನವೀಕರಣ ಆಗಿರಲಿಲ್ಲ. ಹಾಗಾಗಿ ಹಳೇ ಬ್ಯಾಡ್ಜ್ ನಂಬರನ್ನೇ ಬಳಸಬಹುದಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಬಹುತೇಕ ಎಂದರೆ ಶೇ.50ಕ್ಕೂ ಹೆಚ್ಚು ಆಟೋ ಚಾಲಕರ, ಟ್ಯಾಕ್ಸಿ ಚಾಲಕರ ಲೈಸೆನ್ಸ್ ನವೀಕರಣ ಆಗಿರಬಹುದು. ಹಾಗಾಗಿ ಅವರ ಬ್ಯಾಡ್ಜ್ ಸಂಖ್ಯೆ ರದ್ದಾಗಿದೆ. ಈಗ ಸೇವಾಸಿಂಧು ವೆಬ್‌ಪೋರ್ಟಲ್‌ನಲ್ಲಿ ಬ್ಯಾಡ್ಜ್ ಸಂಖ್ಯೆ ಇಲ್ಲದೆ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ಅನೇಕ ಆಟೋ ಚಾಲಕರು ದೂರುತ್ತಿದ್ದಾರೆ. ಕೇಂದ್ರ ಸರ್ಕಾರದ ನಿಯಮದಂತೆ ಈಗ ಅನೇಕರಲ್ಲಿ ಬ್ಯಾಡ್ಜ್ ಇಲ್ಲ. ಅವರಿಗೆ ಪರಿಹಾರ ಸಿಗುವುದಿಲ್ಲ. ನಮ್ಮಲ್ಲಿ ಅರ್ಜಿ ಹಾಕಲು ಅನೇಕ ಮಂದಿ ಬಂದು ಹಿಂದಿರುಗುತ್ತಿದ್ದಾರೆ ಎಂದು ಆಟೋ ಚಾಲಕರ ಅರ್ಜಿ ಅಪ್‌ಲೋಡ್ ಮಾಡುತ್ತಿರುವ ಸೈಬರ್ ಕೇಂದ್ರವೊಂದರ ರವಿ ನಾಯಕ್ ‘ವಿಜಯವಾಣಿ’ಗೆ ವಿವರಿಸಿದರು.
ಸರ್ಕಾರ ಪರಿಹಾರ ಘೋಷಿಸಿದರೂ, ಬಹುತೇಕ ಮಂದಿಗೆ ಈ ಬಾರಿ ನೆರವು ಸಿಗುವುದು ಸಂಶಯ. ಕೇಂದ್ರ ಸರ್ಕಾರ ಬ್ಯಾಡ್ಜ್ ರದ್ದು ಮಾಡಿದೆ. ಈಗ ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಪರಿಹಾರಕ್ಕಾಗಿ ಅರ್ಜಿ ಹಾಕಲು ಬ್ಯಾಡ್ಜ್ ನಂಬ್ರ ಕಡ್ಡಾಯ. ಈ ಕ್ರಮವನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.
ಅರುಣ್ ಸಲಹೆಗಾರ, ಕರವೇ ಆಟೋ ರಿಕ್ಷಾ ಚಾಲಕರ ಸಂಘ