

ಕಾರವಾರ: ಅಡುಗೆ ಮಾಡುವಾಗ ಮೈಮೇಲೆ ಬಿಸಿ ಸಾಂಬಾರು ಬಿದ್ದು ತೀವ್ರವಾಗಿ ಗಾಯಗೊಂಡು ಮೃತಪಟ್ಟ ಹೈಸ್ಕೂಲ್ ಬಿಸಿಯೂಟ ತಯಾರಕಿಯ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಽಕಾರಿ ಗಂಗೂಬಾಯಿ ಮಾನಕರ್ ಅವರ ಮೂಲಕ ಮನವಿ ಸಲ್ಲಿಸಿದರು.
ಮುಂಡಗೋಡಿನ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಪ್ರೌಢಶಾಲೆ ವಿಭಾಗದ ಅಡುಗೆ ತಯಾರಕಿ ಅನ್ನಪೂರ್ಣ ಹಳ್ಯಾಳ(49) ಮೃತಪಟ್ಟಿದ್ದಾರೆ. ಶಾಲೆಯಲ್ಲಿ 615 ಮಕ್ಕಳಿಗೆ ಕೇವಲ ನಾಲ್ವರು ಅಡುಗೆಯವರಿದ್ದಾರೆ.
ಇನ್ನೊಬ್ಬ ಅಡುಗೆ ಸಹಾಯಕಿ ಸಾಂಬಾರು ಪಾತ್ರೆ ಎತ್ತಿಕೊಂಡು ಬರುವಾಗ ಅನ್ನಪೂರ್ಣ ಅವರು ಜಾರಿ ಬಿದ್ದಿದ್ದಾರೆ. ಸಾಂಬಾರು ಅನ್ನಪೂರ್ಣ ಅವರ ಮೈಮೇಲೆ ಬಿದ್ದಿದೆ.
ಸಂಪೂರ್ಣ ದೇಹ ಸುಟ್ಟು ಅವರು ಚಿಕಿತ್ಸೆಗೆ ಸ್ಪಂದಿಸದೇ ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ. ಈಗ ಸುಟ್ಟ ಗಾಯಗಳಿಗಾಗಿ 1 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತಿದೆ. ಅದು ಸಾಕಾಗದು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಸುರಕ್ಷತೆ ಕೈಗೊಳ್ಳಿ:
ಮುಂದೆ ಇಂಥ ಪ್ರಕರಣವಾದಲ್ಲಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ಕ್ರಮ ವಹಿಸಬೇಕು. ಸದ್ಯ 25 ಮಕ್ಕಳಿಗೆ ಒಬ್ಬ ಅಡುಗೆಯವರನ್ನು ನೀಡಲಾಗುತ್ತದೆ. 100 ಮಕ್ಕಳವರೆಗೆ ಇಬ್ಬರು ಅಡುಹೆ ಸಹಾಯಕಿಯರು ನಿರ್ವಹಿಸಬೇಕು. ಅದು ಕಷ್ಟವಾಗುತ್ತದೆ.
ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಿಬ್ಬಂದಿ ನೇಮಿಸುವ ನಿಯಮದ ಬದಲಾಗಿ, ಹೆಚ್ಚುವರಿ ಅಡುಗೆ ಸಿಬ್ಬಂದಿ ನೇಮಿಸಿಕೊಂಡು ಕೆಲಸದ ಒತ್ತಡ ಕಡಿಮೆ ಮಾಡಬೇಕು.ಕೆಲಸದ ಪ್ರದೇಶದಲ್ಲಿ ಅವಗಢಗಳು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜಾಸ್ತಿ ಮಕ್ಕಳಿರುವಲ್ಲಿ ಗಾಡಿಯಂಥ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಯೂ ಟ್ಯೂಬ್ ಮೂಲಕ ಅಡುಗೆಯವರಿಗೆ ತರಬೇತಿ ನೀಡುವ ಪ್ರಕ್ರಿಯೆ ನಿಲ್ಲಬೇಕು ಎಂದು ಒತ್ತಾಯಿಸಿದರು. ವೀರೇಶ, ಶೇಖಪ್ಪ, ಯಲ್ಲಪ್ಪ, ಜಯಶ್ರೀ ಮುಂತಾದವರು ಮನವಿ ಸಲ್ಲಿಕೆ ಸಂದರ್ಭದಲ್ಲಿದ್ದರು.
ಇಂದು ಬಿಸಿಯೂಟ ಬಂದ್
ಮೃತ ಅಡುಗೆಯವರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ನೀಡುವಂತೆ ಒತ್ತಾಯಿಸಿ ಆ.29 ರಂದು ಮುಂಡಗೋಡ ತಾಲೂಕಿನಾದ್ಯಂತ ಬಿಡಿಯೂಟವನ್ನು ಬಂದ್ ಮಾಡಿ ಒತ್ತಾಯಿಸಲಾಗುವುದು ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾ ನಾಯ್ಕ ತಿಳಿಸಿದ್ದಾರೆ.