

ಮೈಸೂರು: ಮಹಿಳೆಯರು ಎಷ್ಟೇ ಕೆಲಸದ ಒತ್ತಡಗಳಿದ್ದರೂ ಮೊದಲು ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸಲಹೆ ನೀಡಿದರು.
ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಪಂ, ತಾಪಂ, ಗ್ರಾಪಂ ಮಹಿಳಾ ಅಧಿಕಾರಿ, ಸಿಬ್ಬಂದಿಗೆ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ತಾಯ್ತನದ ನಂತರ 35 ವರ್ಷ ದಾಟಿದ ಮೇಲೆ ದೇಹದಲ್ಲಾಗುವ ಬದಲಾವಣೆಯಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯಲ್ಲಿರುವ ಆರೋಗ್ಯದ ಮೇಲಿನ ತಾತ್ಸಾರ. ಒಂದು ಮನೆಯಲ್ಲಿ ಮಹಿಳೆಯೊಬ್ಬಳು ಆರೋಗ್ಯವಾಗಿದ್ದರೆ ಸಂಪೂರ್ಣ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂದರು.
ಮಹಿಳೆಯರು, ಮಕ್ಕಳು, ವೃದ್ಧರು ಯಾರಿಗೇ ಆಗಲಿ, ಯಾವುದೇ ಅನಾರೋಗ್ಯ ಕಂಡು ಬಂದರೂ ಅದಕ್ಕೆ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ ಎಂದರು.
ಆರೋಗ್ಯ ಸಮಸ್ಯೆ ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಮನುಷ್ಯನಿಗೆ ಸಹಜವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಭಯಪಡದೆ ಅವುಗಳನ್ನು ಎಚ್ಚರಿಕೆಯಿಂದ ಎದುರಿಸಬೇಕು. ದೇಹದಲ್ಲಿ ಸಣ್ಣ ವ್ಯತ್ಯಾಸ ಕಂಡು ಬಂದರೂ ಚಿಕಿತ್ಸೆ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, 40 ವರ್ಷದ ನಂತರ ಮಹಿಳೆಯರಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ ಅಗತ್ಯ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳು ವಯಸ್ಸಿನ ಮಿತಿಯಿಲ್ಲದೆ ಕಂಡುಬರುತ್ತಿವೆ. ಆದ್ದರಿಂದ ಎಲ್ಲರೂ ಬಹಳ ಜಾಗೃತರಾಗಿ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ತಿಳಿಸಿದರು.
ವಯಸ್ಸಿಗೆ ತಕ್ಕಂತೆ ದೇಹದಲ್ಲಿನ ಏರುಪೇರನ್ನು ಗಮನಿಸಿ ಆರೋಗ್ಯ ಕಾಳಜಿ ವಹಿಸಬೇಕು. ಎಲ್ಲರೂ ಹೊರಗಿನಿಂದ ಆರೋಗ್ಯವಂತರಂತೆಯೇ ಕಂಡರೂ ದೇಹದ ಒಳಗಡೆ ಇರುವ ಸಣ್ಣ ಸಮಸ್ಯೆ ಕಂಡುಕೊಂಡು ಚಿಕಿತ್ಸೆ ಪಡೆಯುವಲ್ಲಿ ಎಡವುತ್ತಿದ್ದೇವೆ. ಇದೇ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹೀಗಾಗಿ ಎಲ್ಲರೂ ಯಾವುದೇ ಸಣ್ಣ ಸಮಸ್ಯೆ ಕಂಡು ಬಂದರೂ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಮಹಿಳೆಯರು ಕೆಲಸಗಳಲ್ಲಿ ಮಗ್ನರಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಎಡವುತ್ತಿದ್ದಾರೆ. ಆರೋಗ್ಯ ಉತ್ತಮವಾಗಿದ್ದರೆ ಯಾವುದೇ ಕೆಲಸ ಮಾಡಲು ಸಾಧ್ಯ. ಹೀಗಾಗಿ ಮೊದಲ ಆದ್ಯತೆ ಆರೋಗ್ಯಕ್ಕೆ ನೀಡಬೇಕು. ಹಬ್ಬ ಹರಿದಿನಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಆ ಹಣದಲ್ಲಿ ಪಾಲಕರಿಗೆ ಹೆಲ್ತ್ ಕಾರ್ಡ್ ಮಾಡಿಸಿಕೊಡುವುದು ಸೂಕ್ತ ಎಂದು ಸಲಹೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣ ರಾಜು, ಉಪ ಕಾರ್ಯದರ್ಶಿ (ಆಡಳಿತ) ಬಿ.ಎಂ.ಸವಿತಾ, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಎಂ.ಎಸ್.ಜಯಂತ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಹಾದೇವ ಪ್ರಸಾದ್ ಇನ್ನಿತರರಿದ್ದರು.