

ವಿಕ್ರಮ ನಾಡಿಗೇರ ಧಾರವಾಡ
ರಾಜ್ಯದ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಾಮಾಜಿಕ ಭದ್ರತೆ ಯೋಜನೆ ಅಡಿ ಸರ್ಕಾರ ವಿವಿಧ ಮಾಸಾಶನಗಳನ್ನು ನೀಡುತ್ತಿದೆ. ಇದೀಗ ಆ ಮಾಸಾಶನಕ್ಕೆ ಅನುದಾನದ ಕೊರತೆ ಎದುರಾಗಿ ಫಲಾನುಭವಿಗಳು ಕಷ್ಟ ಎದುರಿಸುವಂತಾಗಿದೆ.
ಸಾಮಾಜಿಕ ಭದ್ರತೆ ಯೋಜನೆ ಅಡಿ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಮಾಸಾಶನಗಳನ್ನು ನೀಡಲಾಗುತ್ತಿದೆ. ಆದರೆ ಸುಮಾರು 3 ತಿಂಗಳಿಂದ ಫಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಮಾಡಲು ಅನುದಾನ ಕೊರತೆ ಎದುರಾಗಿದೆ. ಹೀಗಾಗಿ ಫಲಾನುಭವಿಗಳು ನಿತ್ಯ ತಹಸೀಲ್ದಾರ ಕಚೇರಿ, ಬ್ಯಾಂಕ್‌ಗಳಿಗೆ ಓಡಾಟ ನಡೆಸುವಂತಾಗಿದೆ.
ಫೆಬ್ರವರಿವರೆಗೂ ಪಿಂಚಣಿಗಳು ಜಮೆ ಆಗಿವೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪಿಂಚಣಿಗಳಿಗೆ ಗ್ರಹಣ ಹಿಡಿದಂತಾಗಿದೆ. ಮಾರ್ಚ್‌ನಿಂದ ಈವರೆಗೆ ಪಿಂಚಣಿ ಜಮೆಯಾಗದ ಕಾರಣ ಬಹುತೇಕ ಫಲಾನುಭವಿಗಳು ಆತಂಕ್ಕೀಡಾಗಿದ್ದಾರೆ. ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂಬ ಚಿಂತೆಯಲ್ಲಿ ತೊಡಗಿ ನಿತ್ಯವೂ ತಹಸೀಲ್ದಾರ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬಹುತೇಕ ಯೋಜನೆಗಳಲ್ಲಿ ಖೊಟ್ಟಿ ದಾಖಲೆ ನೀಡಿ ಲಾಭ ಪಡೆದವರೂ ಸಾಕಷ್ಟು ಜನರಿದ್ದಾರೆ. ಅಂತಹವರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಪಿಂಚಣಿ ಹಣವನ್ನೇ ನಂಬಿ ಜೀವನ ಸಾಗಿಸುತ್ತಿರುವ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಚುನಾವಣೆ ಮುಗಿದು ಸರ್ಕಾರ ರಚನೆಯಾಗಿದೆ. ಸಂಬಂಧಿಸಿದವರು ಸರ್ಕಾರಕ್ಕೆ ಪತ್ರ ಬರೆದು ಮಾಸಾಶನ ಮಂಜೂರಿಗೆ ಮನವಿ ಮಾಡಬೇಕಿತ್ತು. ಆದರೆ ಆ ಕೆಲಸವಾಗಿಲ್ಲ.
ಜನರ ಕಷ್ಟ ಪರಿಹರಿಸಲು ಸದಾ ಸಿದ್ಧ ಎನ್ನುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಶೀಘ್ರ ಮಾಸಾಶನ ಮಂಜೂರು ಮಾಡಿಸುವರೇ? ಎಂಬುದನ್ನು ಕಾದು ನೋಡಬೇಕಿದೆ.
----ಬಾಕ್ಸ್---
ಯಾವ ಯೋಜನೆಗೆ ಎಷ್ಟು?
ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ (64 ರಿಂದ 65 ವಯಸ್ಸು)ಯಲ್ಲಿ 600 ರೂ., ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ (65 ವರ್ಷ ಮೇಲ್ಪಟ್ಟು) 1200 ರೂ., ಸಂಧ್ಯಾ ಸುರಕ್ಷಾ 1200 ರೂ., ಮನಸ್ವಿನಿ 600 ರೂ., ವಿಧವಾ ಯೋಜನೆ 800 ರೂ., ಅಂಗವಿಕಲ (ಶೇ. 45) 800 ರೂ., ಅಂಗವಿಕಲ (ಶೇ. 75) 1400 ರೂ., ಅಂಗವಿಕಲ (ಮಾನಸಿಕ) 2000 ರೂ., ಫಾರ್ಮರ್ ವಿಡೊ ಪೆನ್ಶನ್ ರೂ. 2000 ಹಾಗೂ ಮೈತ್ರಿ ಯೋಜನೆಯಲ್ಲಿ 600 ರೂ. ಪಿಂಚಣಿ ನೀಡಲಾಗುತ್ತಿದೆ.
----ಬಾಕ್ಸ್----
ಫಲಾನುಭವಿ ಮಾಹಿತಿ
ಧಾರವಾಡ ತಾಲೂಕಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಲ್ಲಿ 11645, ಸಂಧ್ಯಾ ಸುರಕ್ಷಾದಲ್ಲಿ 33392, ವಿಧವಾ ವೇತನ 17413, ಅಂಗವಿಕಲ 24565, ಮೈತ್ರಿ 6, ಮನಸ್ವಿನಿ 2537, ಫಾರ್ಮರ್ ವಿಡೊ ಪೆನ್ಶನ್ 45 ಸೇರಿ ಒಟ್ಟು 89603 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ.
------ಕೋಟ್------
ಫಲಾನುಭವಿ ಯೋಜನೆ ಲಾಭ ಪಡೆಯಲು ಅರ್ಹ ಎಂದು ಮಂಜೂರು ಮಾಡುವ ಅಧಿಕಾರ ಮಾತ್ರ ನಮಗಿದೆ. ನಂತರ ಸರ್ಕಾರವೇ ನೇರವಾಗಿ ಫಲಾನುಭವಿ ಖಾತೆಗೆ ಹಣ ಬಿಡುಗಡೆ ಮಾಡುತ್ತದೆ. ಕೆಲವರು ಆಧಾರ ಅಪ್‌ಡೇಟ್ ಮಾಡದ ಕಾರಣ ವಿಳಂಬವಾಗಿರಬಹುದು.
ಡಾ. ಮೋಹನ ಭಸ್ಮೆ, ತಹಸೀಲ್ದಾರ
--------ಕೋಟ್-------
ಯೋಜನೆ ಆರಂಭದ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸರಿಯಾದ ಸಮಯಕ್ಕೆ ಮಾಸಾಶನ ಪಾವತಿ ಆಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 2-3 ತಿಂಗಳು ವಿಳಂಬ ಆಗುತ್ತಿದೆ. ಚುನಾವಣೆ ನಂತರದಲ್ಲಿ ಈವರೆಗೂ ಹಣ ಜಮೆ ಆಗಿಲ್ಲ.
ರಾಚಮ್ಮ ಕೊಕ್ಕರಗುಂಡಿ, ಮಾಳಮಡ್ಡಿ (ವೃದ್ಧಾಪ್ಯ ವೇತನ ಫಲಾನುಭವಿ)