

ಕೋಲಾರ: ಕರೊನಾ ಅನ್‌ಲಾಕ್ ನಂತರ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ವಾರದ ಸಂತೆಗಳೂ ಶುರುವಾಗಿದೆ. ಆದರೆ ಕನಿಷ್ಠ ಮುನ್ನೆಚ್ಚರಿಕಾ ಕ್ರಮ ಕಂಡುಬರದಿರುವುದು ಆತಂಕಕ್ಕೆ ಕಾರಣವಾಗಿದೆ.
ಸಂತೆ ಎಂದರೆ ವಾರದ ಒಂದು ನಿರ್ದಿಷ್ಟ ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಒಟ್ಟುಗೂಡಿ ಗ್ರಾಮೀಣ ಹುಟ್ಟುವಳಿ ವಿನಿಮಯ ಮಾಡಿಕೊಳ್ಳುವ ಆರ್ಥಿಕ ವ್ಯವಸ್ಥೆ. ಈ ಸಂತೆಗೂ ಗುದ್ದು ನೀಡಿದ್ದು ಮಹಾಮಾರಿ ಕರೊನಾ.
ಕರೊನಾ ನಿಯಂತ್ರಣಕ್ಕಾಗಿ ಲಾಕ್‌ಸೂತ್ರಕ್ಕೆ ಸರ್ಕಾರ ಮೊರೆಹೋಗಿದ್ದರಿಂದ ಸಂತೆಗಳನ್ನೂ ನಿಷೇಧಿಸಲಾಯಿತು. ಇದರಿಂದ ರೈತರು, ವ್ಯಾಪಾರಸ್ಥರು, ಮಧ್ಯವರ್ತಿಗಳು, ವ್ಯಾಪಾರ ವಹಿವಾಟುದಾರರು ನಷ್ಟ ಅನುಭವಿಸಿದ್ದರು. ನಾಲ್ಕು ತಿಂಗಳು ಸ್ಥಗಿತಗೊಂಡಿದ್ದ ವಾರದ ಸಂತೆಗಳು ಅನ್‌ಲಾಕ್ 4.0ರ ನಂತರ ಪುನರಾರಂಭಗೊಂಡಿವೆ. ಇದರ ಪರಿಣಾಮ ತಿಂಗಳಿನಿಂದೀಚೆಗೆ ಬಹುತೇಕ ಎಲ್ಲ ಕಡೆ ತರಕಾರಿ ಸಂತೆ ಹಾಗೂ ಜಾನುವಾರು, ಕುರಿಗಳ ಸಂತೆ ಎಂದಿನಂತೆ ನಡೆಯುತ್ತಿದೆ. ಪ್ರತಿ ಸಂತೆಯಲ್ಲೂ ನಾಲ್ಕೈದು ಸಾವಿರ ಜನ ಸೇರುತ್ತಾರೆ.
ಕೋಲಾರದಲ್ಲಿ ಗುರುವಾರ, ಸುಗಟೂರು, ಬಂಗಾರಪೇಟೆ, ಮಾಲೂರಿನ ತೊರಲಕ್ಕಿಯಲ್ಲಿ ಶುಕ್ರವಾರ, ಕಾಮಸಮುದ್ರದಲ್ಲಿ ಗುರುವಾರ, ಶ್ರೀನಿವಾಸಪುರದ ರೋಜರ್ನಹಳ್ಳಿಯಲ್ಲಿ ಶುಕ್ರವಾರ ದನ, ಕುರಿಗಳ ಸಂತೆ, ಟೇಕಲ್‌ನಲ್ಲಿ ಸೋಮವಾರ, ಬೂದಿಕೋಟೆ, ಗೌನಪಲ್ಲಿಯಲ್ಲಿ ಮಂಗಳವಾರ, ಚಿಕ್ಕತಿರುಪತಿಯಲ್ಲಿ ಶನಿವಾರ ಹೀಗೆ ಎಲ್ಲೆಡೆ ತರಕಾರಿ, ಕುರಿ ಕೋಳಿ, ಜಾನುವಾರುಗಳ ಸಂತೆ ಆರಂಭವಾಗಿದೆ. ಕೋಲಾರ ತಾಲೂಕಿನ ವೇಮಗಲ್‌ನಲ್ಲಿ ವಾರದ ಸಂತೆ ಆರಂಭವಾಗಿಲ್ಲದಿದ್ದರೂ ನಿತ್ಯವೂ ಬಸ್ ತಂಗುದಾಣದ ಸುತ್ತಮುತ್ತ ಸಂತೆಯಂತೆಯೇ ವಹಿವಾಟು ನಡೆಯುತ್ತಿದೆ.
ಲಾಕ್‌ಡೌನ್ ಸಡಿಲಿಕೆ ಮುನ್ನೆಚ್ಚರಿಕಾ ಕ್ರಮಗಳ ನಿಬಂಧನೆಗೆ ಒಳಪಟ್ಟಿದೆ. ವ್ಯಾಪಾರ ವಹಿವಾಟು ನಡೆಯುವ ಸ್ಥಳದಲ್ಲಿ ದೈಹಿಕ ಅಂತರ ಪಾಲನೆ, ಮುಖಗವಸು ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಆದರೆ ವಾರದ ಸಂತೆಗಳಲ್ಲಿ ಇದ್ಯಾವುದೂ ಪಾಲನೆಯಾಗುತ್ತಿಲ್ಲ ಎಂಬುದು ಕಟು ವಾಸ್ತವ.
ಕರೊನಾ ನಿರಾತಂಕ!: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ನಿತ್ಯವೂ ಶತಕ ದಾಟುತ್ತಿದೆ. ಸಾವಿನ ಸಂಖ್ಯೆ 3ರಿಂದ 5ರಂತೆ ಏರಿಕೆ ಆಗುತ್ತಿದೆ. ಆದರೆ ಎಲ್ಲೂ ಸೀಲ್‌ಡೌನ್ ಮಾಡಲಾಗುತ್ತಿಲ್ಲವಾದ್ದರಿಂದ ಎಲ್ಲಿ ಸೋಂಕಿತರಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇದರೊಂದಿಗೆ ಜನತೆಗೆ ಕರೊನಾ ಆತಂಕವೇ ಇಲ್ಲ ಎಂಬಂತೆ ಕನಿಷ್ಠ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಸಹಜ ಜೀವನ ನಡೆಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿರುವ ದೃಶ್ಯ.
ದಂಡಕ್ಕೂ ಬಗ್ಗದ ಜನ: ನಗರ ಪ್ರದೇಶದಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ 250 ರೂ. ಹಾಗೂ ಗ್ರಾಮೀಣ ಪ್ರದೇಶಕ್ಕೆ 100 ರೂ. ದಂಡದ ಮೊತ್ತವನ್ನು ಸರ್ಕಾರ ನಿಗದಿಪಡಿಸಿದೆ. ಆದರೆ ಜನತೆ ದಂಡಕ್ಕೂ ಕ್ಯಾರೇ ಎನ್ನುತ್ತಿಲ್ಲ. ದಿನ ಕಳೆದಂತೆ ಮಾಸ್ಕ್ ಧರಿಸದೆ ಓಡಾಡುವವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣರೇ ಹೆಚ್ಚಿಗೆ ಬರುವ ವಾರದ ಸಂತೆಗಳಲ್ಲಂತೂ ಇದು ವಿರಳವಾಗುತ್ತಿದೆ.
ವಾರದ ಸಂತೆಗಳಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಾರೆ. ವ್ಯಾಪಾರಕ್ಕೆ ಬರುವವರಲ್ಲಿ ಯಾರಿಗಾದರು ಒಬ್ಬರಿಗೆ ಸೋಂಕು ಇದ್ದರೆ ಸಂತೆಗೆ ಹೋಗಿದ್ದವರಿಗೂ ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಸ್ಥಳೀಯ ಗ್ರಾಪಂಗಳು ಈ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಸಂತೆಗಳೇ ಕರೊನಾ ಹಾಟ್‌ಸ್ಪಾಟ್ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಲಾಕ್‌ಡೌನ್ ಸಡಿಲಿಕೆ ನಂತರ ಎಲ್ಲ ಚಟುವಟಿಕೆಗೆ ಅವಕಾಶ ಕಲ್ಪಿಸಿರುವುದರಿಂದ ಸಂತೆಗೂ ನಿರ್ಬಂಧ ಇಲ್ಲ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತದೆ. ದಂಡ ಸಂಗ್ರಹಣೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಸಂತೆಗಳಲ್ಲೂ ನಿಯಮ ಪಾಲನೆಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಸಿ. ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ