

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೇ 25ರಿಂದ ಜೂನ್ 7 ರವರೆಗೆ ಮದುವೆ ಸಮಾರಂಭಗಳಿಗೆ ಅನುಮತಿಯಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮದುವೆಗಳಿಂದಲೇ ಕರೊನಾ ಹೆಚ್ಚಳವಾಗಿದೆ. ಸಾಧ್ಯವಾದಷ್ಟು ಮದುವೆಗಳಿಂದ ದೂರ ಇರಬೇಕು. ಸೋಂಕಿತರ ಭೇಟಿ ಸಂದರ್ಭ ಈ ಮಾಹಿತಿ ಲಭಿಸಿದೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ. ಆದಷ್ಟು ಮದುವೆಗಳನ್ನು ಮುಂದೂಡಿದರೆ ಒಳಿತು. ನಿಶ್ಚಿತಾರ್ಥ ಹಾಗೂ ಮೆಹಂದಿ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಸೂಚನೆ ಪ್ರಕಾರ ಆಹಾರೋತ್ಪಾದನೆ ಅಡಿಯಲ್ಲಿ ಬೇಕರಿ ಉತ್ಪನ್ನಗಳನ್ನು ಉತ್ಪಾದಿಸಲು ಹಾಗೂ ಅಗತ್ಯ ವಸ್ತುಗಳ ಖರೀದಿಗೆ ನೀಡಿರುವ ಸಮಯದಲ್ಲಿ ಬೆಳಗ್ಗೆ 6ರಿಂದ 10 ಗಂಟೆವರೆಗೆ ಬೇಕರಿಗಳನ್ನು ತೆರೆಯಲು ಮಂಗಳವಾರದಿಂದ ಅನುಮತಿ ನೀಡಲಾಗಿದೆ ಎಂದರು. ಇತ್ತೀಚೆಗೆ ಸಂಭವಿಸಿದ ತೌಕ್ತೆ ಚಂಡಮಾರುತ ಸಂದರ್ಭದಲ್ಲಿ ಅನೇಕ ಮನೆಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳಿಗೆ ಹಾನಿಯಾಗಿದೆ. ಹೀಗಾಗಿ ಬುಧವಾರ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಎಲೆಕ್ಟ್ರಿಕಲ್ ವಸ್ತುಗಳ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.