

ಮೈಸೂರು: ಬಂಡಿಪಾಳ್ಯ ಎಪಿಎಂಸಿ ದ್ವಾರದ ಮುಂಭಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದಲ್ಲಿರುವ ಅಬಕಾರಿ ಇಲಾಖೆಯ ಉಪಆಯುಕ್ತರ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಂಡಿಪಾಳ್ಯ ಎಪಿಎಂಸಿ ಸುತ್ತಮುತ್ತ ಈಗಾಗಲೇ ಸಾಕಷ್ಟು ಮದ್ಯದಂಗಡಿ ತೆರೆಯಲಾಗಿದೆ. ಈ ನಡುವೆ ಎಪಿಎಂಸಿ ಗೇಟ್ ಮುಂಬಾಗವೇ ಬಾರ್ ತೆರೆಯಲು ಮುಂದಾಗಿದ್ದಾರೆ. ಇದರಿಂದ ಎಪಿಎಂಸಿಗೆ ಕೆಲಸ ಮಾಡಲು ಬರುವ ಬಡವರು, ಕೂಲಿ, ಕಾರ್ಮಿಕರು ಕುಡಿತಕ್ಕೆ ದಾಸರಾಗುತ್ತಾರೆ ಎಂದು ಕಿಡಿಕಾರಿದರು.
ದುಡಿದ ಹಣವನ್ನು ಕಾರ್ಮಿಕರು, ಕೃಷಿ ಬೆಳೆ ಮಾರಾಟದಿಂದ ಹಣವನ್ನೂ ರೈತರು ಮದ್ಯಕ್ಕಾಗಿ ಖರ್ಚು ಮಾಡುತ್ತಾರೆ. ಇದರಿಂದ ಕಾರ್ಮಿಕರ, ರೈತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದ್ದರಿಂದ ಎಪಿಎಂಸಿ ಗೇಟ್ ಮುಂಭಾಗ ಬಾರ್ ತೆರೆಯಲಿಕ್ಕೆ ಸ್ಥಳೀಯರ ಸಹ ವಿರೋಧಿಸಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಯಾವುದೇ ಕಾರಣಕ್ಕೂ ಎಪಿಎಂಸಿ ಗೇಟ್ ಮುಂಭಾಗ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು. ಒಂದು ವೇಳೆ ಮದ್ಯದಂಗಡಿ ತೆರೆಯಲು ನೀಡಿದರೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶಂಕರ್ ಎಚ್ಚರಿಸಿದರು.