

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಧ್ಯದ ನವನಗರವು ಬಹುದೊಡ್ಡ ಜನವಸತಿ ಪ್ರದೇಶವಾಗಿದೆ. ಶಾಂತಿ, ನೆಮ್ಮದಿಯ ತಾಣವಾಗಿರುವ ಇಲ್ಲಿನ ಮುಖ್ಯ ರಸ್ತೆಯಲ್ಲಿ ಎಂಆರ್ ಪಿ ಲಿಕರ್ ಶಾಪ್ ಆರಂಭಿಸಲು ಉದ್ದೇಶಿಸಿರುವುದಕ್ಕೆ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವನಗರ ಹಾಗೂ ಸುತ್ತಲಿನ ಬಡಾವಣೆಗಳಲ್ಲಿ ಸರ್ವಧರ್ಮಗಳ ಜನರು ವಾಸಿಸುತ್ತಿದ್ದಾರೆ. ಇಲ್ಲಿ ವಿವಿಧ ವಿದ್ಯಾಸಂಸ್ಥೆಗಳು, ಮಠ, ಮಂದಿರಗಳು ಬಹಳಷ್ಟಿವೆ. ಎಂಟರಿಂದ ಹತ್ತು ಸಾವಿರದಷ್ಟು ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಮುಖ್ಯ ರಸ್ತೆಯಲ್ಲಿಯೇ ಇವರೆಲ್ಲ ಸಂಚರಿಸುತ್ತಾರೆ.
ಇಂತಹ ಪ್ರಮುಖ ರಸ್ತೆಯಲ್ಲಿ ಲಿಕರ್ ಶಾಪ್ ಆರಂಭಿಸಿದರೆ ಬಡಾವಣೆಯ ಶಾಂತಿ, ನೆಮ್ಮದಿಗೆ ಭಂಗ ಬರುತ್ತದೆ. ಸಾರ್ವಜನಿಕ ಹಿತದ ದೃಷ್ಟಿಯಿಂದ ಇಲ್ಲಿ ಲಿಕರ್ ಶಾಪ್ ಆರಂಭಿಸಬಾರದು ಎಂದು ನಾಗರಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ನವನಗರದ ಮಹಿಳಾ ಮಂಡಳಗಳು, ವಿವಿಧ ಸಮಾಜದ ಪ್ರಮುಖರು, ಸಂ ಸಂಸ್ಥೆಗಳ ಮುಖ್ಯಸ್ಥರು, ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯವರು ನವನಗರದಲ್ಲಿ ಸಭೆ ಸೇರಿ ಲಿಕರ್ ಶಾಪ್ ಆರಂಭವಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ನವನಗರದ ಬಿಆರ್ ಟಿಎಸ್ ಬಸ್ ನಿಲ್ದಾಣದಿಂದ ಒಳಗೆ ಬರುವಾಗ ಹು-ಧಾ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನದ ಎದುರು ಒಂದು ಬಾರ್, ರೆಸ್ಟೋರೆಂಟ್ ಇದೆ. ಇದರಿಂದಲೂ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಇದನ್ನು ಕೂಡ ಸ್ಥಳಾಂತರ ಮಾಡಬೇಕೆಂದು ಸಭೆಯಲ್ಲಿ ಅನೇಕರು ಆಗ್ರಹಿಸಿದರು.
ನವನಗರದಲ್ಲಿ ಲಿಕರ್ ಶಾಪ್ ವಿರುದ್ಧ ಸಾರ್ವಜನಿಕರು ಈಗಾಗಲೇ ಜಿಲ್ಲಾಡಳಿತ, ಅಬಕಾರಿ ಇಲಾಖೆಗೆ ಪತ್ರ ಚಳವಳಿ ಆರಂಭಿಸಿದ್ದಾರೆ. ನವನಗರದ ಪಾಲಿಕೆ ಸದಸ್ಯೆ ಸುನಿತಾ ಸಂಜೀವ ಮಾಳವದಕರ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಒಂದು ವೇಳೆ ಸಾರ್ವಜನಿಕರ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನಿವಾಸಿಗಳಾದ ಸ್ವಾಮಿ ಮಹಾಜನಶೆಟ್ಟರ್, ಕೆ.ಜಿ. ಟಿಕಾರೆ, ಪಿ.ಡಿ. ಕಟ್ಟಿ, ಗಾಯಕವಾಡ, ಜಾಧವ, ಬಸಣ್ಣ ಬಡಿಗೇರ, ಬಸವರಾಜ ಪಾಟೀಲ, ಈರಣ್ಣ ಲಿಂಬಿಕಾಯಿ, ರಾಜು ಸವಡಿಜೋಶಿ, ಹನುಮಂತ ಕೊರವರ, ರಾವೇಂದ್ರ ಪೂಜಾರಿ, ರಮೇಶ ನಂದ್ಯಾಲ, ಕಳ್ಳಿಮಠ, ಗೌಡರ್, ಪ್ರಶಾಂತ ಪೂಜಾರ, ದೀರಜ ವೀರನಗೌಡರ, ಸತೀಶ ದೀತ ಹಾಗೂ ಇತರರು ಎಚ್ಚರಿಸಿದ್ದಾರೆ.