ಮಲ್ಪೆ ಬೀಚ್​ನಲ್ಲಿ ಇಲ್ಲ 'ಜೀವ' ರಕ್ಷಕರು...!

Malpe
Published on

ಸಮುದ್ರಕ್ಕೆ ಲಗ್ಗೆ ಇಡುತ್ತಿರುವ ಪ್ರವಾಸಿಗರು

ಕಡಲಿಗೆ ಬಲಿಯಾಗುವ ಅಮಾಯಕರು

ಪ್ರಶಾಂತ ಭಾಗ್ವತ ಉಡುಪಿ

ಧಾರ್ಮಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಮೂಲಕ ಗಮನ ಸೆಳೆದಿರುವ ಉಡುಪಿ ಜಿಲ್ಲೆ, ಇತ್ತೀಚೆಗಿನ ಕೆಲ ದಶಕಗಳಿಂದ ಇಲ್ಲಿನ ಸುಂದರ ಕಡಲ ತೀರಗಳ ಮೂಲಕವೂ ದೇಶ-ವಿದೇಶದ ಪ್ರವಾಸಿಗರ ಮನ ಸೆಳೆಯುತ್ತಿದೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರ ರಕ್ಷಣೆಗೆ ಸೂಕ್ತ ಸಂಖ್ಯೆಯಲ್ಲಿ ಜೀವರಕ್ಷಕರು ಇಲ್ಲವಾಗಿದ್ದು, ಅನೇಕ ಅಮಾಯಕರು ಕಡಲಿಗೆ ಬಲಿಯಾಗುತ್ತಿದ್ದಾರೆ.

ಮಳೆಗಾಲವಾಗಿದ್ದರಿಂದ ಜಿಲ್ಲೆಯ ಕಡಲ ತೀರಗಳಲ್ಲಿ ಪ್ರವಾಸಿಗರ ಕಲರವ ಇರಲಿಲ್ಲ. ಇದೀಗ ಮುಂಗಾರು ಹಂಗಾಮು ಮುಗಿದಿದ್ದು, ಶಾಲಾ-ಕಾಲೇಜುಗಳಿಗೂ ರಜೆ ಇರುವುದರಿಂದ ಕಳೆದ ಒಂದು ವಾರದಿಂದ ಇಲ್ಲಿನ ಪ್ರಮುಖ ಬೀಚ್​ಗಳಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

ಮಲ್ಪೆಯಲ್ಲಿ ಮೋಜು-ಮಸ್ತಿ

Malpe 2
ದಸರಾ ರಜೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಮಲ್ಪೆ ಬೀಚ್​ಗೆ ದಾಂಗುಡಿ ಇಟ್ಟಿದ್ದಾರೆ. ಇಲ್ಲಿನ ಸುಂದರ ಕಡಲ ತೀರದಲ್ಲಿ ಹಾಗೂ ಸಮುದ್ರದ ನೀರಿಗೆ ಇಳಿದು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚತೊಡಗಿದೆ. ಯುವಕರು, ಯುವತಿಯರು ಹಾಗೂ ಕುಟುಂಬಗಳು ರಜಾ-ಮಜಾ ಅನುಭವಿಸುತ್ತಿವೆ.

ಅಲೆಗಳ ಅಬ್ಬರ

ಈಗಷ್ಟೇ ಮಳೆಗಾಲದ ಅಂತ್ಯದ ಸಮಯ ಆಗಿದ್ದರಿಂದ ಸಮುದ್ರ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದು, ಭಾರಿ ಪ್ರಮಾಣದಲ್ಲಿ ಅಲೆಗಳ ಅಬ್ಬರವಿದೆ. ಬೆರಳೆಣಿಕೆಯಷ್ಟು ಇರುವ ಜೀವರಕ್ಷಕರು ಎಚ್ಚರಿಕೆ ನೀಡುತ್ತಿದ್ದರೂ ಜೀವಾಪಾಯದ ಸ್ವಲ್ಪವೂ ಅರಿವಿಲ್ಲದ ಅನ್ಯ ಜಿಲ್ಲೆಗಳ ಪ್ರವಾಸಿಗರು ನೀರಿನಲ್ಲಿ ಆಟವಾಡುತ್ತ ಸಮುದ್ರದ ಅಬ್ಬರದ ಅಲೆಗಳತ್ತ ಸಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಪ್ರತಿದಿನವೂ ಇಲ್ಲಿ ಒಂದೆರಡು ಅಪಾಯದ ಸನ್ನಿವೇಶ ಘಟಿಸುತ್ತಲೇ ಇದೆ.

ಇಬ್ಬರು ಯುವಕರು ಬಲಿ

Malpe 3
ರಜಾ ಹಿನ್ನೆಲೆಯಲ್ಲಿ ಅ.3ರಂದು ಸಂಜೆ 4.30ಕ್ಕೆ ಹಾಸನ ನಗರದ 7 ಸ್ನೇಹಿತರಿದ್ದ ಯುವಕರ ತಂಡ ಮಲ್ಪೆ ಬೀಚ್​ಗೆ ಆಗಮಿಸಿತ್ತು. ಸಮುದ್ರದ ಭೀಕರತೆಯ ಅರಿವೇ ಇಲ್ಲದ ಆ ಹುಡುಗರು ನೀರಿನಲ್ಲಿ ಆಟವಾಡುತ್ತ ಮುಂದೆ ಮುಂದೆ ಸಾಗುತ್ತಲೇ ಇದ್ದರು. ಅವರಲ್ಲಿ ಚನ್ನಪಟ್ಟಣ ಹಾಸ್ಟೆಲ್​ನ ಮಿಥುನ್​ (20) ಹಾಗೂ ಶಶಾಂಕ್​ (22) ಎಂಬವರು ರಕ್ಕಸ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿ ನೀರಲ್ಲಿ ಮುಳಗಿ ಜೀವ ಬಿಟ್ಟರು. ಆಪದ್ಭಾಂದವ ಈಶ್ವರ ಮಲ್ಪೆ ಮತ್ತು ಅವರ ತಂಡ ಕೂಡಲೇ ಸ್ಥಳಕ್ಕಾಗಮಿಸಿ ಇತರರನ್ನು ರಕ್ಷಿಸಿತ್ತು. ಅ.2ರಂದು ಕೂಡ ಸಮುದ್ರದಲ್ಲಿ ಮುಳುಗುತ್ತಿದ್ದ ಸೋಮವಾರಪೇಟೆ ಕೂಡಿಗೆ ಗ್ರಾಮದ ಮಹಿಳೆಯೊಬ್ಬರನ್ನು ಈಶ್ವರ ಮಲ್ಪೆ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು.

ಆಂಬುಲೆನ್ಸ್​ ವ್ಯವಸ್ಥೆಯೂ ಇಲ್ಲ!

Ishwar Malpe
ಈಶ್ವರ ಮಲ್ಪೆ.

ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಬೀಚ್​ ಪ್ರವಾಸೋದ್ಯಮಕ್ಕೆ ಇತ್ತೀಚೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಆದರೆ, ಇಲ್ಲಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರ ಜೀವಕ್ಕೆ ಸೂಕ್ತ ರಕ್ಷಣೆ ಲಭಿಸದಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯವಾಗಿದೆ. ದಿನವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವ ಮಲ್ಪೆ ಬೀಚ್​ನಲ್ಲಿ ಸದ್ಯ 5 ಜೀವರಕ್ಷಕರು, 4 ಮಂದಿ ಟೂರಿಸ್ಟ್​ ಮಿತ್ರರು ಮಾತ್ರ ಇದ್ದಾರೆ. ನೀರಿನಲ್ಲಿ ಮುಳುಗಿ ಜೀವಾಪಾಯಕ್ಕೆ ಸಿಲುಕುವ ಪ್ರವಾಸಿಗರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್​ ವ್ಯವಸ್ಥೆಯೂ ಇಲ್ಲಿಲ್ಲ. ಕಡಲಿಗೆ ಇಳಿಯಬೇಡಿ, ಜೀವಾಪಾಯ ಆಗಬಹುದು ಎಂಬ ಫಲಕ ಅಳವಡಿಸಿದರೆ ಪ್ರಯೋಜನವಿಲ್ಲ. ಆಗಮಿಸುವ ಪ್ರವಾಸಿಗರ ಸಂಖ್ಯೆಗೆ ತಕ್ಕಂತೆ ಜೀವರಕ್ಷಕರನ್ನು ನೇಮಿಸಬೇಕು. ಮಲ್ಪೆಗೇ ಸೀಮಿತವಾಗಿ 108 ಆಂಬುಲೆನ್ಸ್​ ಮೀಸಲಿಡಬೇಕು ಎನ್ನುತ್ತಾರೆ ಆಪತ್ಬಾಂಧವ ಈಶ್ವರ ಮಲ್ಪೆ.

ಮೂರು ವರ್ಷದಲ್ಲಿ 105 ಜನರ ಸಾವು!

ಬೀಚ್​ಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಇಲ್ಲದ್ದರಿಂದ ಹಾಗೂ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಮೂರು ವರ್ಷದಲ್ಲಿ ಮೀನುಗಾರರು ಸೇರಿದಂತೆ 105 ಪ್ರವಾಸಿಗರು ಮೃತಪಟ್ಟಿದ್ದಾರೆ. 2023ರಲ್ಲಿ 36, 2024ರಲ್ಲಿ 37 ಹಾಗೂ 2025ರಲ್ಲಿ 32 ಜನರು ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ನೀರಲ್ಲಿ ಮುಳುಗಿ ಜೀವಬಿಟ್ಟಿದ್ದಾರೆ.

ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸೂಕ್ತ ಮೂಲಸೌಕರ್ಯಗಳಿಲ್ಲ. ಟೆಂಡರ್​ ಕರೆಯುವಾಗಲೂ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವಾಟರ್​ ಸ್ಪೋರ್ಟ್ಸ್​ (ಎನ್​ಐಡಬ್ಲುಎಸ್​) ಹಾಗೂ ಜನರಲ್​ ತಿಮ್ಮಯ್ಯ ಅಕಾಡೆಮಿ ಆಫ್​ ವಾಟರ್​ ಸ್ಪೋರ್ಟ್ಸ್​ನ ಯಾವುದೇ ಮಾನದಂಡ ಅಳವಡಿಸುತ್ತಿಲ್ಲ. ಹೀಗಾಗಿಯೇ ಬೀಚ್​ಗಳಲ್ಲಿ ಅಮಾಯಕ ಪ್ರವಾಸಿಗರು ಸಾಯುವಂತಾಗಿದೆ. ಅವರೆಲ್ಲರ ಜೀವಹಾನಿಗೆ ಪ್ರವಾಸೋದ್ಯಮ ಇಲಾಖೆಯನ್ನೇ ಹೊಣೆಯಾಗಿಸಬೇಕು. | ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net