

| ಕಿರಣ್ ಮಾದರಹಳ್ಳಿ ಚಾಮರಾಜನಗರ
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅತೀವ ಆಸಕ್ತಿ ತೋರಿರುವ ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆಗೂ ಮುನ್ನ ಕೊಟ್ಟಿದ್ದ ಮುಖ್ಯ ಭರವಸೆಯೊಂದನ್ನು ಮರೆತಿದ್ದು, ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶದಾದ್ಯಂತ ಸದ್ದು ಮಾಡಿದ್ದ ‘ಆಕ್ಸಿಜನ್ ದುರಂತ’ದಲ್ಲಿ ಮಡಿದ ಸೋಂಕಿತರ ಕುಟುಂಬಕ್ಕೆ ಈವರೆಗೂ ನ್ಯಾಯ ಸಿಕ್ಕಿಲ್ಲ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರಂದು ರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿ 30ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟರು. ಇವರ ಕುಟುಂಬಸ್ಥರಿಗೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಉದ್ಯೋಗ, ನ್ಯಾಯ ಮತ್ತು ಪರಿಹಾರ ಕೊಡಿಸುವ ಭರವಸೆ ಇನ್ನೂ ಈಡೇರಿಲ್ಲ.
ಅದರಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಇದಕ್ಕೆ ತೋರಿರುವ ಕಾಳಜಿಯನ್ನು ಆಕ್ಸಿಜನ್ ದುರಂತದ ಸಂತ್ರಸ್ತರಿಗೂ ವಿಸ್ತರಿಸಿ ಅವರಿಗೆ ನ್ಯಾಯ, ಪರಿಹಾರ ಒದಗಿಸಿಕೊಡಬೇಕಾಗಿದೆ.
ಸೆ.27ರಂದು ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ಪ್ರಸಾದ್ಗೆ ಸೂಚನೆ ನೀಡಿದ್ದರು. ಆದರೆ ಇನ್ನೂ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ಸಿಕ್ಕಿಲ್ಲ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯನ್ನು ಬಳಸಿಕೊಂಡು ಬಸ್ಗಳಲ್ಲಿ ಶತಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಈ ಯಶಸ್ಸಿನಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರ ಮಹಿಳೆಯರೂ ಪಾಲುದಾರರು. ಏಕೆಂದರೆ ಇವರು ಉದ್ಯೋಗ, ನ್ಯಾಯ ಪರಿಹಾರಕ್ಕಾಗಿ ಗ್ರಾಮಗಳಿಂದ ಸರ್ಕಾರಿ ಕಚೇರಿಗಳಿಗೆ ಶಕ್ತಿ ಯೋಜನೆಯನ್ನು ಬಳಸಿಕೊಂಡು ಅಲೆಯುತ್ತಲೇ ಇದ್ದಾರೆ.
ರಾಹುಲ್ಗಾಂಧಿ ಸಮ್ಮುಖದಲ್ಲಿ ಸಿಕ್ಕ ಭರವಸೆ: ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಭಾರತ್ ಜೋಡೋ ಯಾತ್ರೆ ಆರಂಭಗೊಂಡ ಸಂದರ್ಭದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ಈ ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಿಮಗೆ ಸರ್ಕಾರಿ ಉದ್ಯೋಗ, ಪರಿಹಾರ, ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ಸಿಕ್ಕಿತ್ತು. ಆದರೆ ಆ ಭರವಸೆ ಇನ್ನೂ ಭರವಸೆಯಾಗೇ ಉಳಿದಿದೆ.
ತಪ್ಪಿತಸ್ಥರಿಗೆ ಶ್ರೀರಕ್ಷೆ: ಆಕ್ಸಿಜನ್ ದುರಂತಕ್ಕೆ ಕಾರಣರಾದವರಿಗೆ ತನಿಖೆ ಪೂರ್ಣಗೊಂಡು ಕ್ರಮಕೈಗೊಳ್ಳದೆ ಇರುವುದೇ ಶ್ರೀರಕ್ಷೆಯಾಗಿಬಿಟ್ಟಿದೆ. ಪ್ರಕರಣದ ತನಿಖೆಗಾಗಿ ಅಂದಿನ ಬಿಜೆಪಿ ಸರ್ಕಾರ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ ಅವರನ್ನು ನಿಯೋಜಿಸಿತ್ತು. ಕಾಂಗ್ರೆಸ್ನ ಆಕ್ಷೇಪದ ಬಳಿಕ ಬಿಜೆಪಿ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಸಮಿತಿ ನೇಮಿಸಿತ್ತು. ಈ ಮಧ್ಯೆ ಹೈಕೋರ್ಟ್ನ ಅಂದಿನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರು ಈ ಪ್ರಕರಣದ ಸತ್ಯಶೋಧನೆ ನಡೆಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿಗೆ ನಿರ್ದೇಶನ ನೀಡಿದರು. ಹೀಗೆ ಪ್ರಾರಂಭದಲ್ಲಿ ಒಂದು ಪ್ರಕರಣ ಮೂರು ತಂಡಗಳಿಂದ ತನಿಖೆಗೊಳಪಟ್ಟಿತ್ತು.
ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ ತನಿಖೆಯಿಂದ ಹಿಂದೆ ಸರಿದರು. ಹೈಕೋರ್ಟ್ ಸತ್ಯಶೋಧನೆ, ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ಮುಂದುವರಿಯಿತು. ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಸಮಿತಿ ಹೈಕೋರ್ಟ್ಗೆ ವರದಿ ಸಲ್ಲಿಸಿತು. ಈ ವರದಿ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕರಣದ ತನಿಖೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ಇನ್ನೂ ತನಿಖೆ ಶುರುವಾಗಲಿಲ್ಲ.
ಹೆಚ್ಚಿನ ಪರಿಹಾರವೂ ಸಿಕ್ಕಿಲ್ಲ: ಹೈಕೋರ್ಟ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಒಟ್ಟು ಸಾವಿನ ಸಂಖ್ಯೆ 24 ಎಂದು ನಮೂದಿಸಿತ್ತು. 13 ಮೃತ ಕುಟುಂಬದ ಸಂತ್ರಸ್ತರಿಗೆ ತಲಾ 5 ಲಕ್ಷ ರೂ., 11 ಸಂತ್ರಸ್ತರಿಗೆ ತಲಾ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ಘೋಷಣೆ ಮಾಡಿತ್ತು. ಸರ್ಕಾರ ಕೊಟ್ಟ ಸತ್ತವರ ಸಂಖ್ಯೆಯನ್ನು ಮೊದಲಿನಿಂದಲೂ ಅಲ್ಲಗಳೆಯುತ್ತಿದ್ದ ಕಾಂಗ್ರೆಸ್ ಮೃತರ ಸಂಖ್ಯೆಯನ್ನು 36 ಎಂದು ತಿಳಿಸಿತ್ತು. ಅಂತೆಯೇ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತ್ರಸ್ತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿದ್ದರು. ಆದರೆ ಸಂತ್ರಸ್ತರ ಕುಟುಂಬಸ್ಥರು ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಭಾರತ್ ಜೋಡೋ ಯಾತ್ರೆ ಬಳಿಕ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಯಂ ಉದ್ಯೋಗ ನೀಡುವ ಭರವಸೆ ಮತ್ತೆ ಸಿಕ್ಕಿತು. ಆದರೆ ನಮಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ, ಪರಿಹಾರವನ್ನೂ ಕೊಟ್ಟಿಲ್ಲ. ಕಾಂಗ್ರೆಸ್ ಸರ್ಕಾರ ನೀಡಿರುವ ಆಶ್ವಾಸನೆಯನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತೇನೆ.
| ಸಿದ್ದರಾಜಮ್ಮ ಮೃತ ಸೋಂಕಿತ ಜಯಶಂಕರ್ ಪತ್ನಿ, ಕೊಳ್ಳೇಗಾಲ
ಸರ್ಕಾರ ಆಕ್ಸಿಜನ್ ದುರಂತದ ತನಿಖೆ ನಡೆಸುತ್ತದೆ. ಸಂತ್ರಸ್ತರ ಕುಟುಂಬಸ್ಥರಿಗೆ ತಾತ್ಕಾಲಿಕ ಉದ್ಯೋಗವನ್ನು ನೀಡಬೇಕು. ಕಾಯಂ ಉದ್ಯೋಗ ನೀಡಲು ಆಗಲ್ಲ. ಸಿಮ್ಸ್ನಲ್ಲಿ ಹಿಂದಿನ ಡೀನ್ ಜತೆಗೆ ಗಲಾಟೆ ನಡೆದ ಸಂದರ್ಭದಲ್ಲಿ ಉದ್ಯೋಗ ನೀಡುವುದಕ್ಕೆ ಅಡ್ಡಿಯಾಯಿತು. ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂ ಉದ್ಯೋಗ ನೀಡಲು ಆರ್ಥಿಕ ಇಲಾಖೆ ಒಪ್ಪಬೇಕಲ್ಲವೇ? ಈ ಬಗ್ಗೆ ನೋಡಿ ಮಾತನಾಡುತ್ತೇನೆ.
| ಸಿ.ಪುಟ್ಟರಂಗಶೆಟ್ಟಿ ಶಾಸಕ, ಚಾಮರಾಜನಗರ