

ಚಿತ್ರದುರ್ಗ: ಆಟೋಗಳಿಗೆ ಹೊಸದಾಗಿ ಪರವಾನಗಿ ನೀಡಬಾರದು ಎಂದು ಆಗ್ರಹಿಸಿ ನಗರ ಆಟೋ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನೂರಾರು ಮಂದಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಪರವಾನಗಿ ಇಲ್ಲದೆ ನಗರದಲ್ಲಿ ಸಂಚರಿಸುತ್ತಿರುವ ಆಟೋಗಳನ್ನು ವಶಕ್ಕೆ ಪಡೆಯಬೇಕು. ಚಾಲಕರ ಸಂಘಟನೆಗಳು ನಿಗದಿಪಡಿಸಿರುವ ಸ್ಥಳಗಳಿಗೆ ಆಟೋ ನಿಲ್ದಾಣ ಕೂಡಲೇ ನಿರ್ಮಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಆಟೋ ಚಾಲಕರಿಗಾಗಿಯೇ ನಿಗಮ ಮಂಡಳಿ ರಚಿಸಬೇಕು. ಆಶ್ರಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಬೇಕು. ನಗರದಿಂದ ಸೀಟು ಹಾಕಿಕೊಂಡು ಹಳ್ಳಿಗಳಿಗೆ ಹೋಗುವುದು ನಿಲ್ಲಬೇಕು. ನಗರ ಸಾರಿಗೆ ಬಸ್‌ಗಳಿಗೆ ಸಮಯ, ಸ್ಥಳ ನಿಗದಿಪಡಿಸಬೇಕು ಎಂದು ಕೋರಿದರು.
ವೀರೇಶ್, ರಾಜು, ಕೆ.ಎಂ.ಮಲ್ಲಿಕಾರ್ಜುನ, ಮಂಜುನಾಥ್ ಸೇರಿ ನೂರಾರು ಆಟೋ ಚಾಲಕರು-ಮಾಲೀಕರು ಪಾಲ್ಗೊಂಡಿದ್ದರು.