ಶಿಥಿಲ ಕಟ್ಟಡಗಳಲ್ಲಿ ಪಾಠ ಬೇಡ

Siddapura KDP Meeting
Published on

ಸಿದ್ದಾಪುರ: ಮಕ್ಕಳ ಸುರಕ್ಷತೆ ಕುರಿತು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ, ಬಿಸಿಎಂ ಹಾಸ್ಟೇಲ್ ಹಾಗೂ ಅಂಗನವಾಡಿ ಇಲಾಖೆ ಅಧಿಕಾರಿಗಳು ಹೆಚ್ಚು ಗಮನ ನೀಡಬೇಕು. ಯಾವುದೇ ಕಟ್ಟಡ ಶಿಥಿಲವಾಗಿದ್ದರೆ ಅಂತಹ ಸ್ಥಳದಲ್ಲಿ ಪಾಠ ಮಾಡಬೇಡಿ ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಪಿ.ಬಸವರಾಜ ಹೇಳಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಂಗಳವಾರ ಮಾತನಾಡಿದರು.

ಬಿಇಒ ಎಂ.ಎಚ್.ನಾಯ್ಕ ಮಾತನಾಡಿ, ಈಗಾಗಲೇ ಶಿಥಿಲಗೊಂಡ ಶಾಲಾ ಕಟ್ಟಡಗಳ ಹಾಗೂ ದುರಸ್ಥಿ ಮಾಡು ಕೊಠಡಿಗಳ ಕುರಿತು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದೆ. ಎಚ್​ಪಿಎಸ್ ಹೊಸಳ್ಳಿ ಶಾಲೆ ಶಿಘ್ರದಲ್ಲಿಯೇ ದುರಸ್ಥಿ ಆಗಬೇಕಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಡಿಮೆ ಮಕ್ಕಳಿರುವ ಶಾಲೆಯನ್ನು ತಾತ್ಕಾಲಿಕವಾಗಿ ಬಂದ ಮಾಡಿ ಸಮೀಪ ಇರುವ ಶಾಲೆಗೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಟಿಎಚ್​ಒ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಮಾರ್ಚ ತಿಂಗಳಲ್ಲಿ 125 ಜನರಿಗೆ ನಾಯಿ ಕಡಿದಿದೆ. ಔಷಧದದ ಕೊರತೆ ಇಲ್ಲ. ತಾಲೂಕಿನ ಕಾನಸೂರು ಸಮೀಪದ ಕೋಡ್ಸರದಲ್ಲಿ ಈ ಪ್ರಥಮವಾಗಿ ಯುವಕನಿಗೆ ಮಂಗನ ಖಾಯಿಲೆ ಕಂಡು ಬಂದಿದೆ ಎಂದು ತಿಳಿಸಿದರು.

ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕ ಹೆಗಡೆ ಮಾತನಾಡಿ ಏ.26ರಿಂದ ಜಾನುವಾರುಗಳಿಗೆ ಕಾಲು ಬಾಯಿ ಹಾಗೂ ಚರ್ಮಗಂಟು ರೋಗದ ಲಸಿಕೆ ನೀಡಲಾಗುತ್ತದೆ. ತಾಲೂಕಿನಲ್ಲಿ ಅಂದಾಜು 35762 ಜಾನುವಾರುಗಳಿದೆ.ಪ್ರಸಕ್ತ ವರ್ಷ ಜಾನುವಾರು ಮೇವಿನ ಕೊರತೆ ಇಲ್ಲ ಎಂದು ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಮಾ ಎಂ.ಎಸ್.ಮಾತನಾಡಿ ತಾಲೂಕಿನಲ್ಲಿ ಏಪ್ರಿಲ್ ತಿಂಗಳ ಇಂದಿನವರೆಗೆ 21ಮೀಮೀ ಮಳೆ ಬಿದ್ದು ವಾಡಿಕೆ ಮಳೆಗಿಂದ ಶೇ.60ರಷ್ಟು ಹೆಚ್ಚಾಗಿದೆ. ಇದರಿಂದ ಯಾವುದೇ ಬೆಳೆಗೆ ಹಾನಿ ಆಗಿಲ್ಲ. ಬೇಸಿಗೆ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ.ಮಾತನಾಡಿ ಕೊರ್ಲಕೈ ಹಾಗೂ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಕೃಷಿಕರಿಗೆ ಕಳೆದ ವರ್ಷದ ಬೆಳೆ ವಿಮೆ ಒಟ್ಟೂ 104ಲಕ್ಷ ರೂಗಳು ಜಮಾ ಆಗಿದೆ. ಉಳಿದ ಗ್ರಾಪಂ ವ್ಯಾಪ್ತಿಯ ರೈತರಿಗೆ ಜಮಾ ಆಗಿಲ್ಲ. ಉಳಿದವರಿಗೆ ಬೆಳೆ ವಿಮೆ ನೀಡುವಂತೆ ಕೇಂದ್ರ ಸರ್ಕಾರ ಈಗಾಗಲೇ ಎರಡು ಸಲ ವಿಮಾ ಕಂಪನಿಗೆ ನೋಟಿಸ್ ನೀಡಿದೆ ಆದರೂ ನೀಡಿಲ್ಲ ಎಂದು ಹೇಳಿದರು.

ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ತಾಪಂ ವ್ಯವಸ್ಥಾಪಕ ಬಸವರಾಜ, ಹೆಸ್ಕಾಂ, ನಿರಾವರಿ, ಸಮಾಜ ಕಲ್ಯಾಣ, ಜಿಪಂ, ಲೋಕೋಪಯೋಗಿ, ಸಿಡಿಪಿಒ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net