

ಚಿಕ್ಕನಾಯಕನಹಳ್ಳಿ : ಬಡವರು ಹಾಗೂ ನಿವೇಶನ ರಹಿತರಿಗಾಗಿ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರದ ಹಲವು ಯೋಜನೆಗಳಿದ್ದರೂ ಪುರಸಭೆ ವ್ಯಾಪ್ತಿಯಲ್ಲಿ ಇದು ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.
ಪಟ್ಟಣದಲ್ಲಿ ಹೆಚ್ಚಾಗಿ ಕಟ್ಟಡ ಕಾರ್ಮಿಕರು, ಕೂಲಿ ಕೆಲಸ ಮಾಡುವವರು, ಅಲೆವಾರಿ ಜನಾಂಗದ ಕುಟುಂಬಗಳು ನಿವೇಶನವಿಲ್ಲದೆ ಬಾಡಿಗೆ ಮನೆಗಳಲ್ಲಿ, ಗುಂಡು ತೋಪಿನಂತಹ ಜಾಗಗಳಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರೂ ಇಂತಹವರಿಗಾಗಿ ನಿವೇಶನ ನೀಡುವ ಜವಾಬ್ದಾರಿ ಹೊತ್ತಿರುವ ಪುರಸಭೆ ಮಾತ್ರ ನಿರ್ಲಕ್ಷ್ಯ ವಹಿಸಿದೆ.
ಬಡವರಿಗೆ ಉಚಿತ ನಿವೇಶನ ಹಂಚಲು ಪುರಸಭೆಯಿಂದ ದಿಬ್ಬದಹಳ್ಳಿ ಬಳಿ ಜಮೀನು ಗುರುತಿಸಿ 12 ವರ್ಷ ಕಳೆದಿದ್ದು, 10 ವರ್ಷಗಳ ಹಿಂದೆ ಪಟ್ಟಣದಲ್ಲಿ 512 ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ, ನಿವೇಶನ ವಿತರಣೆಯಾಗಿಲ್ಲ. ನೆಪಮಾತ್ರಕ್ಕೆ ಕಳೆದ ಬಾರಿ ಆಶ್ರಯ ಸಮಿತಿ ಸಭೆ ನಡೆಸಿ ಕೈತೊಳೆದುಕೊಂಡಿತು.
ನಿವೇಶನ ಹಂಚಲು ರಸ್ತೆ, ಜಮೀನಿನ ವಿಷಯಗಳ ಸಮಸ್ಯೆ ಇದ್ದು, ಪಟ್ಟಣದಿಂದ ಸುವಾರು 3 ಕಿ.ಮೀ.ದೂರವಿರುವ ಈ ನಿವೇಶನಗಳಿಗೆ ಹೋಗಲು ಸಂಪರ್ಕ ರಸ್ತೆಯದ್ದೇ ಸಮಸ್ಯೆ. ಆಶ್ರಯ ನಿವೇಶನಗಳಿಗೆ ಸಂಪರ್ಕ ರಸ್ತೆ 30 ಅಡಿ ಅಗಲವಿರಬೇಕು ಎಂದು ಹೇಳಿದ್ದರಿಂದ ಪುರಸಭೆಗೆ ನಿವೇಶನ ಪಕ್ಕದಲ್ಲಿನ 1.8 ಎಕರೆ ಜಮೀನು ಖರೀದಿಗೆ ಸರ್ಕಾರದಿಂದ 9 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ರಸ್ತೆಯೇ ಇಲ್ಲದ ನಿವೇಶನಗಳಿಗೆ ನೀರು, ವಿದ್ಯುತ್, ಇನ್ನಿತರ ಮೂಲಸೌಕರ್ಯ ಒದಗಿಸುವುದು ಯಾವಾಗ ಎಂಬುದು ಪ್ರಶ್ನೆಯಾಗಿದೆ.
ದಿಬ್ಬದಹಳ್ಳಿ ಬಳಿ ಖರೀದಿ: ನಿವೇಶನ ಹಂಚಿಕೆಗೆ ವಾಜಪೇಯಿ ನಗರ ಯೋಜನೆಯಲ್ಲಿ ಪುರಸಭೆ ಆಶ್ರಯ ಸಮಿತಿ ಪಟ್ಟಣದ ಹೊರವಲಯದ ದಿಬ್ಬದಹಳ್ಳಿ ಬಳಿ 5.18ಎಕರೆ ಜಮೀನನ್ನು 2006ರಲ್ಲಿ ಖರೀದಿಸಿತ್ತು. ಈ ಸ್ಥಳದಲ್ಲಿ ಒಟ್ಟು 252 ನಿವೇಶನಗಳನ್ನು ವಿಂಗಡಿಸಿ ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಅನುಮೋದನೆಗಾಗಿ ಕಡತಗಳನ್ನು ಕಳುಹಿಸಲಾಗಿತ್ತು. ಆದರೆ, ಅಧಿಕಾರಿಗಳು ಸರಿಯಾದ ಸಂಪರ್ಕ ರಸ್ತೆ ಇಲ್ಲ ಎಂಬ ಕಾರಣದಿಂದ ಕಡತಗಳನ್ನು ಸರಿ ಮಾಡಿ ಕಳುಹಿಸುವಂತೆ ಪುರಸಭೆಗೆ ವಾಪಸ್ ಕಳುಹಿಸಿದ್ದರು.
12 ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದು, ಬಾಡಿಗೆ ಕಟ್ಟಿ ಸಾಕಾಗಿದೆ. ನಿವೇಶನಕ್ಕಾಗಿ 2006ರಲ್ಲೇ ಅರ್ಜಿ ಸಲ್ಲಿಸಿದ್ದೆ. ಆದರೆ, ಪುರಸಭೆಯವರೂ ನಿವೇಶನ ನೀಡುವಂತಹ ಗೋಜಿಗೆ ಹೋಗಿಲ್ಲ. ಇನ್ನಾದರೂ ನಮ್ಮಂತಹ ಕೂಲಿ ಕಾರ್ಮಿಕರಿಗೆ ಸರ್ಕಾರ ನೆರವಾಗಬೇಕು. ರಾಜು ಉಡೇವು ಬೀದಿಯ ಕಟ್ಟಡ ಕಾರ್ಮಿಕ ಹಲವಾರು ವರ್ಷಗಳಿಂದ ನಿವೇಶನ ರಹಿತರಿಗೆ ನಿವೇಶನ ಹಂಚುವಲ್ಲಿ ಪುರಸಭೆ ವಿಫಲವಾಗಿದ್ದು, ಗುರುತಿಸಿರುವಂತಹ ನಿವೇಶನಕ್ಕೆ ಹೋಗಲು ಜೋಗಿಹಳ್ಳಿ ಭಾಗದ ಮೂಲಕ ದಾರಿ ಮಾಡಿಸಿ ನಿವೇಶನ ಹಂಚಲಾಗುತ್ತದೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ