

ಚಿಕ್ಕಬಳ್ಳಾಪುರ: ರಾಜಕೀಯಕ್ಕೆ ಬರುವ ಉದ್ದೇಶ ನನಗಿಲ್ಲ. ಜನ ಸೇವೆಯಲ್ಲಿ ತೊಡಗಿರುವ ಪತಿಯನ್ನು ಬೆಂಬಲಿಸುವುದಕ್ಕಷ್ಟೇ ಮೊದಲ ಆದ್ಯತೆ ಎಂದು ಸಂಸದ ಡಾ ಕೆ.ಸುಧಾಕರ್ ಪತ್ನಿ ಡಾ ಪ್ರೀತಿ ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಕ್ಷೇತ್ರದಲ್ಲಿ ಡಾ ಕೆ.ಸುಧಾಕರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಶಾಸಕರು, ಸಚಿವರಾದ ಬಳಿಕ ಸಂಸದರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದು ಅವರ ಅಭಿವೃದ್ಧಿ ಕೆಲಸಗಳು ಮೆಚ್ಚುಗೆಗೆ ಪಾತ್ರವಾಗಿರುವುದು ಜನರಿಗೆ ಗೊತ್ತಿರುವ ವಿಚಾರ ಎಂದರು.
ಡಾ ಕೆ.ಸುಧಾಕರ್ ಜನಪರ ಸೇವೆಗಳಿಗೆ ಬೆಂಬಲವಾಗಿ ನಿಲ್ಲುವುದಕ್ಕೆ ಮೊದಲ ಆದ್ಯತೆ. ಅವರು ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದಿದ್ದು ಸುಳ್ಳು ಆರೋಪ, ಟೀಕೆಗಳಿಗೆ ಎಂದಿಗೂ ಹೆದರುವುದಿಲ್ಲ ಎಂದು ತಿಳಿಸಿದರು.
*ವಿವಿಧೆಡೆ ಭೇಟಿ, ದೇವರ ದರ್ಶನ
ಗಣೇಶ ಚತುರ್ಥಿ ಅಂಗವಾಗಿ ಡಾ ಕೆ.ಎಸ್.ಆರ್.ಫೌಂಡೇಷನ್ ಮೂಲಕ ಡಾ ಪ್ರೀತಿ ಸುಧಾಕರ್ ಕ್ಷೇತ್ರದಲ್ಲಿ ಗಣಪತಿ ಪ್ರತಿಷ್ಠಾನೆಯ ಮಹೋತ್ಸವದ ೬೩೦ ಸಮಿತಿಗಳಿಗೆ ತಲಾ ೧೦ ಸಾವಿರ ರೂಗಳ ದೇಣಿಗೆಯನ್ನು ನೀಡಿದರು. ವಿವಿಧೆಡೆ ತೆರಳಿ, ದೇವರ ದರ್ಶನ ಪಡೆದರು.