

ಕಾರವಾರ: ಇನ್ಶುರೆನ್ಸ್ ಇಲ್ಲದ್ದರೆ ಪೊಲೀಸ್ ಇಲಾಖೆಯಿಂದ ಖಾಸಗಿ ವಾಹನಗಳಿಗೆ ದಂಡ ಹಾಕಲಾಗುತ್ತದೆ. ಆದರೆ, ಸರ್ಕಾರಿ ವಾಹನವೇ ಇನ್ಶುರೆನ್ಸ್ ಇಲ್ಲದೇ ಓಡಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಕಾರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಽಕಾರಿಯ ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನು ಕುಮಟಾ ಉಪವಿಭಾಗಾಽಕಾರಿಗಳು ಬಳಸುತ್ತಿದ್ದರು. ಆದರೆ, ಅದರ ಇನ್ಶುರೆನ್ಸ್ 2016 ರಲ್ಲೇ ಮುಗಿದಿದ್ದು, ಮರಳಿ ನವೀಕರಿಸದಿರುವುದು ಪತ್ತೆಯಾಗಿದೆ. ಮಾತ್ರವಲ್ಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬಳಸುತ್ತಿರುವ ವಾಹನಕ್ಕೂ ಇನ್ಶುರೆನ್ಸ್ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪತ್ತೆಯಾಗಿದ್ದು ಹೇಗೆ..? ಶನಿವಾರ ಕುಮಟಾ ಪಟ್ಟಣದಲ್ಲಿ ಎಸಿ ಅವರ ಕಾರು ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿತ್ತು. ಕಾರಿನಲ್ಲಿ ಯಾವುದೇ ಅಽಕಾರಿ ಇರಲಿಲ್ಲ. ಯಾರಿಗೂ ಹೆಚ್ಚಿನ ಪೆಟ್ಟೂ ಆಗಲಿಲ್ಲ. ಆದರೆ, ಪೊಲೀಸ್ ಠಾಣೆಯಲ್ಲಿ ಎಸಿ ಅವರ ಕಾರು ಚಾಲಕ ದೂರು ದಾಖಲಿಸಿದ್ದಾರೆ. ಆಗ ಇನ್ಶುರೆನ್ಸ್ ಇಲ್ಲದೇ ಇರುವುದು ಪತ್ತೆಯಾಗಿದೆ. ಜಿಲ್ಲೆಯ ಇನ್ನೂ ಹಲವು ಇಲಾಖೆಗಳ ವಾಹನ ಇನ್ಶುರೆನ್ಸ್ ಇಲ್ಲದೇ ಓಡಾಡುತ್ತಿರುವ ಅನುಮಾನವಿದ್ದು, ಪರಿಶೀಲಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಸಮಸ್ಯೆ ಆಗಿದ್ದೆಲ್ಲಿ..? ಸರ್ಕಾರಿ ವಾಹನಗಳಿಗೆ ಕರ್ನಾಟಕ ಸರ್ಕಾರದ ಇನ್ಶುರೆನ್ಸ್ ಇಲಾಖೆ(ಕೆಜಿಐಡಿ)ಯಿಂದಲೇ ವಾಹನ ಇನ್ಶುರೆನ್ಸ್ ಮಾಡಿಸಲಾಗುತ್ತದೆ. ಇನ್ಶುರೆನ್ಸ್ ಅವಽ ಮುಕ್ತಾಯವಾಗುವ ಮುಂಚೆ ಕೆಜಿಐಡಿಗೆ ಸಂಬಂಧಪಟ್ಟ ಇಲಾಖೆಯಿಂದ ನವೀಕರಣ ಮಾಡಲು ಪತ್ರ ಕಳಿಸಬೇಕು ಹಾಗೂ ಹಣ ವರ್ಗಾವಣೆ ಮಾಡಬೇಕು. ಆದರೆ, ಕುಮಟಾ ಎಸಿ ಕಾರಿನ ದಾಖಲೆಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿದ್ದವು. ಅವರು ಕಾರಿನ ಇನ್ಶುರೆನ್ಸ್ ನವೀಕರಣಕ್ಕೆ ಪತ್ರ ಕಳಿಸಬೇಕಿತ್ತು. ವಾಹನ ನಮ್ಮ ಬಳಿ ಇಲ್ಲ ಎಂಬ ಕಾರಣಕ್ಕೆ ಅವರು ತಲೆಕೆಡಿಸಿಕೊಂಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಽಕಾರಿ ಬಳಸುತ್ತಿರುವ ವಾಹನ ಕುಮಟಾ ಉಪವಿಭಾಗಾಧಿಕಾರಿಗೆ ಸೇರಿದ್ದಾಗಿದ್ದು, ಅವರು ಇನ್ಶುರೆನ್ಸ್ ನವೀಕರಣ ಮಾಡಬೇಕಿತ್ತು. ಅವರು ಮಾಡಲಿ ಎಂದು ಇವರು, ಇವರು ಮಾಡಲಿ ಎಂದು ಅವರು ಬಿಟ್ಟು ಅವಗಢಕ್ಕೆ ಕಾರಣವಾಗಿದೆ.
ನಾನು ಅಧಿಕಾರ ವಹಿಸಿಕೊಳ್ಳುವುದಕ್ಕೂ ಬಹಳ ವರ್ಷಗಳ ಹಿಂದೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಾಹನವನ್ನು ಕುಮಟಾ ಎಸಿ ಅವರಿಗೆ ನೀಡಲಾಗಿದೆ ಎಂಬ ಮಾಹಿತಿ ತಿಳಿದುಕೊಂಡಿದ್ದೇನೆ. ಅವರ ವಾಹನ ನಮ್ಮ ಬಳಿ ಇದೆ. ಏಕೆ ಹಾಗೆ ಮಾಡಲಾಗಿತ್ತು ಎಂದು ಪರಿಶೀಲಿಸಲಾಗುವುದು. ಇನ್ಶುರೆನ್ಸ್ ಇಲ್ಲದಿರುವುದು ಈಗ ಗಮನಕ್ಕೆ ಬಂದಿದ್ದು, ಕ್ರಮ ವಹಿಸಲಾಗುವುದು. ಶಿವಕ್ಕ ಮಾದರ್ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ