

ಕುಶಾಲನಗರ: ಸರ್ಕಾರ ಕೊಡಗು ಜಿಲ್ಲೆಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ ಎಂದು ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.
ಕುಶಾಲನಗರದ ಪ್ರವಾಹ ಪೀಡಿತ ಪ್ರದೇಶಗಳಾದ ಕುವೆಂಪು ಬಡಾವಣೆ ಮತ್ತು ಸಾಯಿ ಬಡಾವಣೆಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಿಗೆ ಮಳೆ ಪರಿಹಾರವಾಗಿ ಸರಕಾರ ಹಣ ಘೋಷಣೆ ಮಾಡಿದೆ. ಆದರೆ ಕೊಡಗಿನ ಜಿಲ್ಲಾಧಿಕಾರಿಗಳ ಖಾತೆಗೆ ಮುಂಜಾಗ್ರತಾ ಕ್ರಮವಾಗಿ 35 ಕೋಟಿಗಳನ್ನು ಇಡಲಾಗಿದೆ ಮಳೆ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಕೊಡಗಿಗೆ ಯಾವುದೇ ಹಣದ ಕೊರತೆ ಇಲ್ಲ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮತ್ತಷ್ಟು ಪರಿಹಾರಕ್ಕಾಗಿ ಮತ್ತು ಅಗತ್ಯ ಕ್ರಮಕ್ಕಾಗಿ ನುರಿತ ಮುಖ್ಯ ಅಭಿತಂತರರ ಸಭೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಕಾವೇರಿ ನದಿಯ ಹೂಳು ತೆಗೆಯಲು ಹಾಗು ನದಿಗೆ ಗೇವಿಯನ್ ವಾಲ್ ನಿರ್ಮಿಸಲು ಮತ್ತು ಹಾರಂಗಿ ಜಲಾಶಯದ ಹೂಳು ತೆಗೆಯಲು 130 ಕೋಟಿ ರೂ ಗಳ ಅನುದಾನವನ್ನು ಕಾಯ್ದಿರಿಸಲಾಗಿದೆ. ಮಳೆ ಕಡಿಮೆಯಾದ ಮೇಲೆ ಹೂಳೆತ್ತುವ ಕಾರ್ಯವನ್ನು ಪ್ರಾರಂಭಿಸಲಾಗುವುದು. ಆದ್ದರಿಂದ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಬೇಸಿಗೆಯಲ್ಲಿ ಕೃಷಿಗೆ ಕಾಲುವೆ ಮೂಲಕ ನೀರು ಹರಿಬಿಡಲಾಗುತ್ತಿತ್ತು. ಆದರೆ ಹುಣಸೂರು ಮತ್ತು ಪಿರಿಯಾಪಟ್ಟಣದ ರೈತರು ಹೊಗೆಸೊಪ್ಪು ಹೆಚ್ಚಾಗಿ ಬೆಳೆಯುವುರಿಂದ ಕಾಲುವೆಯಲ್ಲಿ ನೀರು ಹರಿಬಿಡುವುದರಿಂದ ಹೊಗೆಸೊಪ್ಪಿನ ಇಳುವರಿ ಕಡಿಮೆಯಾಗಿ ರೈತರಿಗೆ ತೊಂದರೆ ಉಂಟಾಗುತ್ತದೆ ಎಂದು ರೈತರ ವಿರೋಧವಿದೆ ಎಂದು ಸ್ಪಷ್ಟನೆ ನೀಡಿದರು.
ಬೇಸಿಗೆಯಲ್ಲಿ ನದಿಯಿಂದ ಮರಳು ತೆಗೆಯಲು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ. ಮರಳು ನೂತನ ನೀತಿಗೆ ನಾಂದಿಯಾಡಲಾಗುವುದು ಎಂದರು.
ಇದೇ ಸಂದರ್ಭ ಸಾಯಿ ಬಡಾವಣೆಯ ಕೆಲವು ನಿವಾಸಿಗಳು ಪ್ರವಾಹದಿಂದ ಆಗುತ್ತಿರುವ ಹಾನಿ ಮತ್ತು ಆಂತಕದ ಬಗ್ಗೆ ಉಸ್ತುವಾರಿ ಸಚಿವರಿಗೆ ವಿವರಿಸಿದರು.
ಮಡಿಕೇರಿ ಶಾಸಕರು, ಪ.ಪಂ.ಅಧ್ಯಕ್ಷ ಜಯವರ್ಧನ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಎಂ.ಚರಣ್, ಜಿಲ್ಲಾಧಿಕಾರಿ ಡಾ.ಸತೀಶ್, ಕೊಡಗು ಜಿಲ್ಲಾ ಪೊಲೀಸ್ ವರಿಷ್ಟ ಅಯ್ಯಪ್ಪ, ತಹಸೀಲ್ದಾರ್ ಟಿ.ಎಂ.ಪ್ರಕಾಶ್, ಪ.ಪಂ.ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಸೇರಿದಂತೆ ಇತರರು ಹಾಜರಿದ್ದರು.