

ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಹಾಗೂ ಪಕ್ಷ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದು ಸುಳ್ಳು. ಈ ವಿಷಯದಲ್ಲಿ ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ವಿಭಜಿಸುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ವ್ಯವಸ್ಥೆಯಲ್ಲಿ ಈ ಆಯ್ಕೆ ನಡೆದಿದೆ. ಪಕ್ಷ ಸಂಘಟನೆಯಲ್ಲಿ ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಹೆಚ್ಚು ಆದ್ಯತೆ ನೀಡಿದ್ದು ಬಿಜೆಪಿ. ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ನಂಜುಂಡಪ್ಪ ಅವರ ವರದಿ ಅನುಷ್ಠಾನವಾಗಿದೆ. ಪಕ್ಷದಲ್ಲಿನ ನೇಮಕಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.
ಈ ಬೆಳವಣಿಗೆ ಬಗ್ಗೆ ಮಾಜಿ ಸಚಿವ ವಿ. ಸೋಮಣ್ಣ ಹಾಗೂ ಇನ್ನೂ ಕೆಲವು ನಾಯಕರು ಕೇಂದ್ರದ ವರಿಷ್ಠರನ್ನು ಭೇಟಿಯಾಗುವುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವರು ರಾಷ್ಟ್ರೀಯ ಅಧ್ಯಕ್ಷರನ್ನು, ಕೇಂದ್ರ ನಾಯಕರನ್ನು ಭೇಟಿ ಮಾಡಲು ಸ್ವತಂತ್ರರು. ಆದರೆ, ಮಾಧ್ಯಮದ ಮುಂದೆ ಚರ್ಚೆ ಬೇಡ. ವಿ. ಸೋಮಣ್ಣ ಪಕ್ಷದ ಪ್ರಮುಖ ನಾಯಕರಾಗಿದ್ದು, ಅವರೊಂದಿಗೆ ನಾನು ಸಹ ಮಾತನಾಡುತ್ತೇನೆ ಎಂದು ಹೇಳಿದರು.