

ಪಿ.ಬಿ.ಹರೀಶ್ ರೈ ಮಂಗಳೂರು
ಕರಾವಳಿಯ ಪ್ರಮುಖ ಆದಾಯಗಳಲ್ಲಿ ಒಂದಾದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಮತ್ತೆ ಹೊಡೆತ ಎದುರಾಗಿದೆ. ಪ್ರತಿವರ್ಷ ಮೇ ತಿಂಗಳಲ್ಲಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಉಡುಪಿ, ಕೊಲ್ಲೂರು ಸಹಿತ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಭಕ್ತ ಜನಸಾಗರ ಇರುತ್ತದೆ. ಆದರೆ ದೇವಾಲಯ ನಗರಗಳಿಗೆ ಹೆಚ್ಚಿನ ಆದಾಯ ಬರುತ್ತಿದ್ದ ಈ ಋತುವಿನಲ್ಲೇ ಕರೊನಾ ಕರಿಛಾಯೆ ಆವರಿಸಿದೆ.
ರಾಜ್ಯವಷ್ಟೇ ಅಲ್ಲ, ದೇಶದ ವಿವಿಧ ಭಾಗಗಳಿಂದ ದ.ಕ. ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಾರೆ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ 55 ಎ ಗ್ರೇಡ್ ದೇವಾಲಯಗಳು ಕರಾವಳಿ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಈ ಪೈಕಿ ವಾರ್ಷಿಕ 100 ಕೋಟಿ ರೂ.ಆದಾಯ ಇರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದೆ.
ಸೇವೆ, ಪ್ರಸಾದ ಮಾರಾಟ ಇಲ್ಲ: ಪೂಜೆ, ಹರಕೆ ಸೇವೆ ಹಾಗೂ ಪ್ರಸಾದ ಮಾರಾಟ ದೇವಸ್ಥಾನಗಳ ಆದಾಯ ಮೂಲ. ದ.ಕ ಹಾಗೂ ಉಡುಪಿ ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಪ್ರತಿದಿನ 1 ಕೋಟಿ ರೂ.ಗೂ ಅಧಿಕ ಆದಾಯ ಸೇವೆಗಳ ಮೂಲಕವೇ ಬರುತ್ತದೆ. ದೇವಾಲಯಗಳ ಲಾಡ್ಜ್, ಮದುವೆ ಹಾಲ್‌ಗಳಿಂದಲೂ ಆದಾಯ ಸಂಗ್ರಹವಾಗುತ್ತದೆ. ಕಳೆದ ವರ್ಷ ಲಾಕ್‌ಡೌನ್ ಪರಿಣಾಮ ದೇವಾಲಯಗಳು ಬಂದ್ ಆಗಿ ಆದಾಯ ಕುಸಿಯಿತು. 2019-20ನೇ ಸಾಲಿನ ಆದಾಯಕ್ಕೆ ಹೋಲಿಸಿದರೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 30 ಕೋಟಿ ರೂ ಹಾಗೂ ಕೊಲ್ಲೂರು ದೇವಸ್ಥಾನದಲ್ಲಿ 20 ಕೋಟಿ ರೂ.ಆದಾಯ ಕಡಿಮೆಯಾಗಿದೆ.
ದರ್ಶನಕ್ಕೆ ಹಿಂದೇಟು, ವ್ಯಾಪಾರವೂ ಇಲ್ಲ: ಪುಣ್ಯಕ್ಷೇತ್ರಗಳಲ್ಲಿ ವ್ಯಾಪಾರ ಮಾಡುವವರಿಗೆ ಯಾತ್ರಿಕರು ಬಂದರೆ ಮಾತ್ರ ವ್ಯಾಪಾರ. ಲಾಕ್‌ಡೌನ್ ಅವಧಿ ಮುಗಿದು ಕರೊನಾ ಭೀತಿ ಕಡಿಮೆಯಾದರೂ ಧಾರ್ಮಿಕ ಪ್ರವಾಸೋದ್ಯಮ ತಕ್ಷಣ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಪುಣ್ಯಕ್ಷೇತ್ರಗಳಲ್ಲಿ ಸಾಕಷ್ಟು ಜನಸಂದಣಿಯಾಗುವ ಕಾರಣ ಭಕ್ತರು ಒಮ್ಮೆಲೆ ಬರಲು ಹಿಂದೇಟು ಹಾಕಬಹುದು. ಮಳೆಗಾಲ ಆರಂಭವಾದರೆ ಜನ ಬರುವುದು ಮತ್ತಷ್ಟು ಕಡಿಮೆಯಾಗುತ್ತದೆ ಎನ್ನುತ್ತಾರೆ ತೀರ್ಥಕ್ಷೇತ್ರಗಳ ವ್ಯಾಪಾರಸ್ಥರು.
ಕಳೆದ ಮೂರು ವರ್ಷಗಳ ಆದಾಯ
ಕುಕ್ಕೆ ಸುಬ್ರಹ್ಮಣ್ಯ
2018-19: 92.09 ಕೋಟಿ ರೂ.
2019-20: 98.92 ಕೋಟಿ ರೂ.
2020-21: 68.94 ಕೋಟಿ ರೂ.
ಕೊಲ್ಲೂರು
2018-19: 41.79 ಕೋಟಿ ರೂ.
2019-20: 45.65 ಕೋಟಿ ರೂ.
2020-21: 26.52 ಕೋಟಿ ರೂ.
ಲಾಕ್‌ಡೌನ್ ಪರಿಣಾಮ ಕಳೆದ ವರ್ಷ 30 ಕೋಟಿ ರೂ.ನಷ್ಟು ಆದಾಯ ಕುಸಿದಿದೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿಲ್ಲ. ಈಗ ಯಾತ್ರಿಕರಿಲ್ಲದ ಕಾರಣ ದೇವಸ್ಥಾನದ ಎಲ್ಲ ವಸತಿಗೃಹಗಳ ದುರಸ್ತಿ ಕೈಗೊಂಡಿದ್ದೇವೆ. ಮಾಸ್ಟರ್ ಪ್ಲಾೃನ್ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ಹಂತದಲ್ಲಿ ಹೊಸ ಅನ್ನದಾಸೋಹ ಛತ್ರ, ರಥಬೀದಿ ಅಭಿವೃದ್ಧಿ ಸಹಿತ ವಿವಿಧ ಕಾಮಗಾರಿಗಳು ನಡೆಯಲಿವೆ.
ಮೋಹನ್‌ರಾಮ್ ಸುಳ್ಳಿ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ