

ಪ್ರಕಾಶ್ ಮಂಜೇಶ್ವರ ಮಂಗಳೂರು
ಓಬಿರಾಯನ ಕಾಲದಂತೆ ಗೋಚರಿಸುವ ಎಲ್ಲೆಡೆ ಬಿರುಕುಗಳು ಗೋಚರಿಸುವ ಮಣ್ಣಿನ ಗೋಡೆಯ ಹಳೇ ಮನೆ.. ಹೆಂಚು, ಟರ್ಪಾಲು, ಅಲ್ಯೂಮಿನಿಯಂ ತಗಡುಗಳನ್ನು ಹೊದೆಸಿ ಮಾಡಿದ ಮಾಡು.. ಶೌಚಗೃಹವಿಲ್ಲ, ವಿದ್ಯುತ್ ಸಂಪರ್ಕವಿಲ್ಲ. ನಡುವೆ ಸ್ವಂತ ಮನೆಯ ಕನಸು ಬೆನ್ನತ್ತಿ ಬದುಕುತ್ತಿದೆ ಈ ಹಿರಿಯ ಜೀವ.
ಇದು ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ.15 (ಕುಂಜತ್ತಬೈಲು ದಕ್ಷಿಣ) ಮೈರೋಡಿಗುಡ್ಡೆಯಲ್ಲಿ ಏಕಾಂಗಿಯಾಗಿ ಬದುಕುತ್ತಿರುವ 72 ವಯಸ್ಸಿನ ವೃದ್ಧೆ ಮೋಹಿನಿ ಎಂಬುವರ ವ್ಯಥೆ.
ಮೋಹಿನಿಯವರ ಪತಿ ಗತಿಸಿ ಹಲವು ವರ್ಷಗಳಾಗಿವೆ. ಮನೆಯ ಪರಿಸ್ಥಿತಿ ಕಂಡ ಊರಿನ ಕೆಲ ಶಿಕ್ಷಣ ಪ್ರೇಮಿಗಳು ಮೋಹಿನಿಯವರ ಮನವೊಲಿಸಿ ಅವರ ಮಗನನ್ನು ಜಿಲ್ಲೆಯ ವಸತಿ ಶಾಲೆಗೆ ಸೇರಿಸಿದ್ದು, ಶಿಕ್ಷಣ ಮುಂದುವರಿದಿದೆ. ಒಂದು ತುಂಡು ಭೂಮಿಗಾಗಿ ಮೋಹಿನಿ ನಾಲ್ವರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಅವರು ಭೇಟಿಯಾದ ತಹಸೀಲ್ದಾರ್ ಮತ್ತು ಇತರ ಅಧಿಕಾರಿಗಳ ಲೆಕ್ಕ ಇಡುವುದೇ ಕಷ್ಟ. ಇಷ್ಟು ಹೋರಾಟದ ಬಳಿಕ ಅವರು ಪಡೆದದ್ದು ಬರೀ ಎರಡೂವರೆ ಸೆಂಟ್ಸ್ ಜಾಗ. ಅದು ಕೂಡ ಆಕೆಯ ಕಷ್ಟ ಕಂಡು ಮರುಗಿದ ಕೆಲ ಜನರ ಪ್ರಯತ್ನದಿಂದ ದೊರೆತದ್ದು.
ಈ ನಡುವೆ, ಅವರ ಮನೆ ಪಕ್ಕದಲ್ಲೇ ತಡೆಗೋಡೆ ಮತ್ತು ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವುದು ಮೋಹಿನಿ ಅವರನ್ನು ಕೆರಳಿಸಿದೆ. ಹತ್ತಿರದಲ್ಲೇ ಬೇರೆ ಜಾಗವಿದ್ದರೂ ನನ್ನ ತುಂಡು ಜಾಗವನ್ನೇ ಕಬಳಿಸಲು ಜನಪ್ರತಿನಿಧಿಗಳು, ಸುತ್ತಲಿನ ಕೆಲವರು ಒಂದಾಗಿದ್ದಾರೆ. ತಡೆಗೋಡೆ ನಿರ್ಮಾಣ ಸಂದರ್ಭ ಹತ್ತಿರ ಇದ್ದ ಒಂದು ನಳ್ಳಿ ನೀರು ಸಂಪರ್ಕ ಕೂಡ ಕಡಿತಗೊಂಡಿದೆ ಎನ್ನುವುದು ಅವರ ಆಕ್ರೋಶ.
ಮೋಹಿನಿ ಅವರಿಗೆ ಮನೆ ನಿರ್ಮಿಸಲು ಮೂರು ಲಕ್ಷ ರೂ. ಮಂಜೂರಾಗಿದೆ. ತಡೆಗೋಡೆ ಮತ್ತು ರಸ್ತೆ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಅವರ ಜಮೀನಿನಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಈ ತಡೆಗೋಡೆಯಿಂದ ಅವರ ಮನೆಗೆ ಕೂಡ ರಕ್ಷಣೆ ದೊರೆಯಲಿದೆ.
ಸುಮಂಗಲಾ, ಕಾರ್ಪೊರೇಟರ್, ಕುಂಜತ್ತಬೈಲು ದಕ್ಷಿಣ
ಯೋಗ್ಯ ಮನೆ, ಶೌಚಗೃಹ, ವಿದ್ಯುತ್, ಅಡುಗೆ ಅನಿಲ ಮುಂತಾದ ಮೂಲಸೌಕರ್ಯಗಳಿಲ್ಲದೆ ಏಕಾಂಗಿಯಾಗಿ ಮೋಹಿನಿ ಬದುಕುತ್ತಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ, ಸ್ಥಳೀಯ ಸಂಘಸಂಸ್ಥೆಗಳು ಕೈಜೋಡಿಸಬೇಕು.
ಅಂಜನಾ ಕಾಮತ್, ಶಿಕ್ಷಕಿ