

ಧಾರವಾಡ: ಕಾವೇರಿ ಜಲಾಶಯದಿಂದ ತಮಿಳನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಸೆ. 29ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದ್ದರಿಂದ ಧಾರವಾಡ ಕೂಡ ಬಂದ್ ಆಗುವ ಸಾಧ್ಯತೆ ಇದೆ.
ಮಹದಾಯಿ, ಕಳಸಾ- ಬಂಡೂರಿ ಹೋರಾಟದ ಪ್ರಮುಖ ಸಂಘಟನೆಯಾಗಿರುವ ಮಹದಾಯಿಗಾಗಿ ಮಹಾವೇದಿಕೆ ನೇತೃತ್ವದಲ್ಲಿ ಇತ್ತೀಚೆಗೆ ಸಭೆ ನಡೆದಿದೆ. ಮಹದಾಯಿ ಹೋರಾಟದಂತೆ ಕಾವೇರಿ ಹೋರಾಟಕ್ಕೂ ಬೆಂಬಲ ಸೂಚಿಸುವ ನಿರ್ಣಯ ಕೈಗೊಳ್ಳಲಾಗಿದೆ. ವಿವಿಧ ರೈತಪರ, ಕನ್ನಡಪರ, ವ್ಯಾಪಾರಸ್ಥರ ಸಂಘಟನೆ, ಕಾರ್ಮಿಕ ಸಂಘಟನೆ, ಹೋಟೆಲ್ ಮಾಲೀಕರ ಸಂಘ, ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘಟನೆ, ಮಹಿಳಾಪರ, ವಿದ್ಯಾರ್ಥಿ ಸಂಘಟನೆಗಳು ಬಂದ್ ಬೆಂಬಲಿಸಲು ನಿರ್ಧರಿಸಿದ್ದಾರೆ. ನಾಡಿನ ನೆಲ- ಜಲ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುವ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ ಕೂಡ ಬಂದ್ ಬೆಂಬಲಿಸಲು ಸಹಮತ ವ್ಯಕ್ತಪಡಿಸಿರುವುದು ಹೋರಾಟಕ್ಕೆ ಬಲ ಬಂದ0ತಾಗಿದೆ.
ಸೆ. 29ರಂದು ಬಂದ್ ಕರೆ ನೀಡಿದ್ದರೂ ಸರ್ಕಾರಿ ಕಚೇರಿಗಳು, ಶಾಲೆ- ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸಿರುವುದಿಲ್ಲ. ಶಾಂತಿಯುತವಾಗಿ ಬಂದ್ ಆಚಾರಿಸಲು ಯಾವುದೇ ಅಡ್ಡಿ ಇಲ್ಲ. ಬಲವಂತವಾಗಿ ಬಂದ್ ಮಾಡಿಸುವುದು, ಸರ್ಕಾರಿ ಅಥವಾ ಖಾಸಗಿ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಕಂಡುಬ0ದರೆ ಪೊಲೀಸ್ ಇಲಾಖೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಬಂದ್ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ತಾಲೂಕು ಕೇಂದ್ರಗಳು ಮತ್ತು ಪೋಲಿಸ್ ಠಾಣೆಗಳಿಗೊಂದು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿದೆ. ವಿವಿಧ ಹಂತದ ಪೊಲೀಸ್ ಅಽಕಾರಿಗಳು, ಸಿಬ್ಬಂದಿ, ೨ ಕೆಎಸ್‌ಆರ್‌ಪಿ ತುಕಡಿ ಮತ್ತು ೨೨೦ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಲಾಗಿದೆ. ಡಾ. ಗೋಪಾಲ ಬ್ಯಾಕೋಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ