ಇನ್ನೂ ಇಲ್ಲ ಮಳೆ ಸುಳಿವು

SVR Drought
Published on

ಸವಣೂರ: ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತಾಲೂಕಿನ ರೈತರು ಕಂಗಾಲಾಗಿದ್ದಾರೆ.

ಇಂದಲ್ಲ ನಾಳೆ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಆದರೆ, ನಾಲ್ಕೈದು ದಿನ ಕಳೆದರೂ ಮಳೆಯ ಸುಳಿವಿಲ್ಲದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಶ್ರಮ ಮತ್ತು ಬಿತ್ತನೆ ಬೀಜ ಮಣ್ಣುಪಾಲಾದಂತಾಗಿದೆ.

ಕಳೆದ ವರ್ಷ ವರುಣ ಅರ್ಭಟ ಹೆಚ್ಚಾಗಿ ಬೆಳೆ ಕೈಗೆಟುಕಲಿಲ್ಲ. ಈ ಬಾರಿ ಮಳೆ ಕೈ ಕೊಟ್ಟಿದೆ. ಮೇ ತಿಂಗಳಿನಲ್ಲಿ ವಾಡಿಕೆಯ ಶೇ. 75 ರಷ್ಟು ಮಳೆಯಾಗಬೇಕಾಗಿತ್ತು. ಆದರೆ, 48.5ಮಿಮೀ. ಮಳೆಯಾದ್ದರಿಂದ ರೈತರು ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದರು. ರೋಹಿಣಿ ಮಳೆ ಸುರಿದಿದ್ದರೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ ರೋಹಿಣಿಯೂ ಇಲ್ಲ, ಮೃಗಶಿರಾ ಮಳೆಯ ಸುಳಿವೂ ಇಲ್ಲ.

ತಾಲೂಕಿನಲ್ಲಿ ಮೇ ತಿಂಗಳಿಂದ ಇಲ್ಲಿಯವರೆಗೆ 62 ಮಿಮೀ. ಮಳೆಯಾಗಿದೆ. ಹತ್ತಿಮತ್ತೂರ ಹಾಗೂ ಸವಣೂರ ಹೋಬಳಿ ಭಾಗದಲ್ಲಿ ಮಾತ್ರ ಕೊಂಚ ಮಳೆಯಾಗಿದೆ. ಅಲ್ಪ ಪ್ರಮಾಣದಲ್ಲಿ ಮಳೆಯಾದ್ದರಿಂದ ಬಿತ್ತನೆಗೆ ಅನುಕೂಲವಾಗಿರಲಿಲ್ಲ.

ಬಿತ್ತನೆ ಕ್ಷೇತ್ರ

19,900 ಹೆಕ್ಟೇರ್‌ನಷ್ಟು ಬಿಟಿ ಹತ್ತಿ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ.53ರಷ್ಟು ಬಿತ್ತನೆಯಾಗಿದೆ. ಅಲ್ಲದೆ, ಈ ಬಾರಿ ಹತ್ತಿ ಕ್ಷೇತ್ರ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. 8900 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ. 53ರಷ್ಟು ಬಿತ್ತನೆ ಮಾಡಲಾಗಿದೆ. ಹೆಸರು 418ಹೆ. ಗುರಿ ಹೊಂದಲಾಗಿದೆ, 11 ಹೆ. ಬಿತ್ತನೆ ಮಾಡಲಾಗಿದೆ. ಸೋಯಾ 365 ಹೆ. ಗುರಿ ಹೊಂದಲಾಗಿದ್ದು, ಶೇ.15ರಷ್ಟು ಬಿತ್ತನೆ ಮಾಡಲಾಗಿದೆ. ತಾಲೂಕಾದ್ಯಂತ ಅಂದಾಜು 45,224 ಹೆಕ್ಟೇರ್ ಬಿತ್ತನೆಯಾಗಬೇಕಾಗಿತ್ತು. ಆದರೆ, ಶೇ. 14ರಷ್ಟು ಬಿತ್ತನೆಯಾಗಿದೆ. ರೈತರು ಬಿತ್ತನೆಗೆ ಭೂಮಿ ಹದಗೊಳಿಸಿ, ಅಗತ್ಯದಷ್ಟು ಬೀಜ-ಗೊಬ್ಬರ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಮಳೆರಾಯ ಮಾತ್ರ ಕೃಪೆ ತೋರುತ್ತಿಲ್ಲ.

ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದಿದ್ದರಿಂದ ಬಿತ್ತನೆಯ ಕಾರ್ಯ ಕುಂಠಿತಗೊಂಡಿದೆ. ರೈತರು ಮಳೆ ಅವಲಂಬಿತ ಬೆಳೆ ಬದಲಾಗಿ ಸಿರಿಧಾನ್ಯ ಬಿತ್ತನೆಗೆ ಮುಂದಾಗಬೇಕು. ರೈತರಿಗೆ ಅವಶ್ಯವಾಗಿರುವ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಮಳೆಯ ಕುರಿತು ನಿತ್ಯ ಮಾಹಿತಿ ನೀಡಲಾಗುತ್ತಿದೆ.ಸವಿತಾ ಚಕ್ರಸಾಲಿ, ಸಹಾಯಕ ಕೃಷಿ ನಿರ್ದೇಶಕಿ

ನಿತ್ಯ ಮಳೆ ಆಗಮನದ ನಿರೀಕ್ಷೆಯಲ್ಲಿ ಇದ್ದೇವೆ. ಮಳೆಯನ್ನು ನೆಚ್ಚಿಕೊಂಡು ಅಲ್ಪ ಸ್ವಲ್ಪ ಬಿತ್ತನೆ ಮಾಡಿದ್ದೇವೆ. ಬಿಸಿಲಿಗೆ ಬೀಜಗಳು ಕಮರಿ ಹೋಗಿವೆ.ರಮೇಶ ಅರಗೋಳ, ಮಂತ್ರೋಡಿ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net