

ಬೆಳಗಾವಿ: ಗೋಕಾಕದ ಸಿಹಿ ಖಾದ್ಯ ಕರದಂಟು ದೇಶದಲ್ಲೇ ಹೆಸರುವಾಸಿ. ಆದರೆ, ಈಗ ಕರೊನಾ ಭೀತಿ ಆವರಿಸಿದ್ದರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಈ ವ್ಯವಸ್ಥೆಯಿಂದ ಒಳ್ಳೆಯ ರುಚಿ ಹಾಗೂ ತಾಜಾತನಕ್ಕೆ ಪ್ರಸಿದ್ಧವಾದ ಗೋಕಾಕ ಕರದಂಟು ಉದ್ಯಮಕ್ಕೇ ಲಾಕ್ ಬಿದ್ದಿದೆ.
ದೇಶವ್ಯಾಪಿ ಎಲ್ಲ ವಿಧದ ವ್ಯಾಪಾರ ವಹಿವಾಟು ನಿಂತಿದ್ದರಿಂದ ಬಲು ಬೇಡಿಕೆಯ ಕರದಂಟನ್ನು ಕೇಳುವವರೇ ಇಲ್ಲ. ಪ್ರತಿದಿನ ನೂರಾರು ಟನ್ ಸಿಹಿ ಕರದಂಟು ತಯಾರಿಸುತ್ತಿದ್ದ ಹಲವು ಕುಟುಂಬಗಳ ಬದುಕೀಗ ಕರೊನಾ ಕಹಿಯಾಗಿದೆ.
ದೇಶಾದ್ಯಂತ ಏ. 14ರ ವರೆಗೆ ಲಾಕ್‌ಡೌನ್ ಘೋಷಿಸಿದ್ದರಿಂದ ಗೋಕಾಕ ಕರದಂಟು ಮಾರಾಟ ಮಾಡುತ್ತಿದ್ದ ಹತ್ತಾರು ಅಂಗಡಿಗಳು ಬಾಗಿಲು ಮುಚ್ಚಿವೆ. ಸಿಹಿ ಖಾದ್ಯ ತಯಾರಿಸಿ ದೇಶ, ವಿದೇಶಗಳಿಗೆ ರಫ್ತು ಮಾಡುತ್ತಿದ್ದ ಹಲವು ಕಟುಂಬಗಳು ಅತಂತ್ರವಾಗಿವೆ. ಗೋಕಾಕ ನಗರದಲ್ಲಿ ಸ್ವೀಟ್ಸ್ ಅಂಗಡಿಗಳೇ ಹೆಚ್ಚಾಗಿವೆ. ಆದರೆ, ಕರೊನಾ ಭೀತಿಯಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಕರದಂಟು ನಾಡಿಗೆ ಕರೆಂಟು ಹೊಡೆದಂತಾಗಿದೆ.
ರಫ್ತು ಸ್ಥಗಿತ: ಗೋಕಾಕ ಕರದಂಟು ಕರ್ನಾಟಕ ಸೇರಿ ದೇಶ ಹಾಗೂ ವಿದೇಶಗಳಿಗೆ ರ‌್ತಾಗುತ್ತವೆ. ಇಲ್ಲಿನ ಖ್ಯಾತ ಹತ್ತಾರು ಅಂಗಡಿಗಳ ಮಾಲೀಕರು 25 ರಿಂದ 30 ಟನ್‌ನಷ್ಟು ಕರದಂಟು ತಯಾರಿಸಿ ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯ ಹಾಗೂ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಾರೆ. ಆದರೆ, ಕರೊನಾದಿಂದಾಗಿ ಲಾಕ್‌ಡೌನ್ ಆಗಿದ್ದರಿಂದ ಎಲ್ಲೆಡೆಯ ಸ್ವೀಟ್ಸ್ ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಕರದಂಟು ಉತ್ಪನ್ನವನ್ನೇ ನಂಬಿದ್ದ ಹಲವು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಎರಡು ಪ್ರಕಾರದಲ್ಲಿ ಲಭ್ಯ: ಗೋಕಾಕ ಕರದಂಟಿನಲ್ಲಿ ಎರಡು ಪ್ರಕಾರಗಳಿವೆ. ಪ್ರಥಮ ದರ್ಜೆ (ಎ-1) ಕರದಂಟು ಕೆ.ಜಿ.ಗೆ 700 ರೂ. ಹಾಗೂ ದ್ವಿತೀಯ ದರ್ಜೆ (ಎ-2) ಕರದಂಟು ಕೆ.ಜಿ.ಗೆ 400 ರೂ.ಗೆ ಮಾರಾಟವಾಗುತ್ತದೆ. ಪ್ರಥಮ ದರ್ಜೆಯ ಕರದಂಟು ತಯಾರಿಸಲು ಕೆ.ಜಿ.ಗೆ ಸುಮಾರು 500 ರಿಂದ 550 ರೂ. ಹಾಗೂ ದ್ವಿತೀಯ ದರ್ಜೆಯ ಕರದಂಟಿಗೆ 300 ರಿಂದ 350 ರೂ. ಖರ್ಚಾಗುತ್ತದೆ. ಕೆ.ಜಿ. ಕರದಂಟು ಮಾರಾಟವಾದರೆ ಶೇ. 10ರಷ್ಟು ಮಾತ್ರ ಲಾಭವಾಗುತ್ತದೆ. ಆದರೆ, ಏಕಾಏಕಿ ಕರೊನಾ ಭೀತಿ ಹಾಗೂ ಲಾಕ್‌ಡೌನ್ ಆದೇಶದಿಂದ ಈ ಹಿಂದೆ ತಯಾರಿಸಿದ ನೂರಾರು ಕ್ವಿಂಟಾಲ್ ಕರದಂಟು ಹಾಗೇ ಉಳಿದಿದ್ದು, ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ನೊಂದುಕೊಳ್ಳುತ್ತಾರೆ ಸ್ವೀಟ್ಸ್ ಅಂಗಡಿ ಮಾಲೀಕರು.
ಗಾಯದ ಮೇಲೆ ಬರೆ: ಘಟಪ್ರಭಾ ನದಿಗೆ ಹೊಂದಿಕೊಂಡಿರುವ ಗೋಕಾಕ ನಗರ ಕಳೆದ ವರ್ಷ ಪ್ರವಾಹಕ್ಕೆ ನಲುಗಿ ಹೋಗಿತ್ತು. ಸತತ ಮಳೆ ಹಾಗೂ ನೆರೆಯಿಂದ ಕರದಂಟು ತಯಾರಿಸುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಘಟಪ್ರಭೆಯ ರುದ್ರ ನರ್ತನಕ್ಕೆ ತತ್ತರಿಸಿದ್ದ ಗೋಕಾಕದ ಸ್ವೀಟ್ಸ್ ತಯಾರಿಸುವ ಕುಟುಂಬಗಳು ಈಗಷ್ಟೇ ಅಳಿದುಳಿದ ಮನೆಗಳನ್ನು ದುರಸ್ತಿ ಮಾಡಿಕೊಂಡು ಸಹಜ ಜೀವನಕ್ಕೆ ಕಾಲಿಟ್ಟಿದ್ದವು. ಆದರೆ, ಏಕಾಏಕಿ ಕಾಣಿಸಿಕೊಂಡು ಕರೊನಾದಿಂದ ಸಿಹಿ ಖಾದ್ಯ ತಯಾರಿಸುತ್ತಿದ್ದ ನೂರಾರು ಕಟುಂಬಗಳು ಮತ್ತೆ ಬೀದಿಗೆ ಬಿದ್ದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆನ್‌ಲೈನ್ ಆರ್ಡರ್ ಸ್ಥಗಿತ: ಗೋಕಾಕ ಕರದಂಟು ಆನ್‌ಲೈನ್ ಮಾರುಕಟ್ಟೆ ಮೂಲಕ ಮುಂಬೈನಿಂದ ಹಲವು ದೇಶಗಳಿಗೆ ರಫ್ತಾಗುತ್ತದೆ. ಕರೊನಾ ಭೀತಿ ಉಂಟಾಗುವುದಕ್ಕಿಂತ ಮೊದಲು ಪ್ರತಿದಿನ 2 ರಿಂದ 3 ಟನ್ ಕರದಂಟು ಆರ್ಡರ್ ಬರುತ್ತಿತ್ತು. ಆದರೆ, ಈಗ ಗೋಕಾಕ ಕರದಂಟು ರಫ್ತು ಸ್ಥಗಿತಗೊಂಡಿದೆ. ಮಾರ್ಚ್ ಮೊದಲ ವಾರದಲ್ಲಿ ವಿವಿಧ ರಾಜ್ಯಗಳಿಂದ 50 ಟನ್ ಹಾಗೂ ವಿದೇಶಗಳಿಂದ 10 ರಿಂದ 12 ಟನ್ ಕರದಂಟು ಆರ್ಡರ್ ಬಂದಿತ್ತು. ಲಾಕ್‌ಡೌನ್ ಇರುವುದರಿಂದ ದೇಶ, ವಿದೇಶ ಹೋಗಲಿ ಪಕ್ಕದ ಜಿಲ್ಲೆಗಳಿಗೂ ಕರದಂಟು ಸಾಗಣೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಕರದಂಟು ತಯಾರಕರು.
ಕರೊನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದಾಗಿ ಗೋಕಾಕ ಕರದಂಟು ರಫ್ತು ನಿಲ್ಲಿಸಿದ್ದೇವೆ. ಪ್ರತಿದಿನ ನೂರಾರು ಜನರು ಆನ್‌ಲೈನ್ ಮೂಲಕ ಕರದಂಟು ಆರ್ಡರ್ ಮಾಡುತ್ತಿದ್ದಾರೆ. ಆದರೆ, ಪೂರೈಸಲು ಸಾಧ್ಯವಾಗುತ್ತಿಲ್ಲ. ಗೋಕಾಕದಲ್ಲಿ ನೂರಾರು ಕುಟಂಬಗಳು ಕರದಂಟು ತಯಾರಿಸುತ್ತವೆ. ಆದರೆ, ಮಾರುಕಟ್ಟೆ ಬಂದ್ ಆಗಿದ್ದರಿಂದ ಅವರಿಗೆಲ್ಲ ದಿಕ್ಕೇ ತೋಚದಂತಾಗಿದೆ. ಸರ್ಕಾರ ಕರದಂಟು ತಯಾರಕರಿಗೆ ಆರ್ಥಿಕ ನೆರವು ನೀಡಬೇಕು. |ಉದಯ ಶಂಕರ ದೇವರಮನಿ ಸದಾನಂದ ಸ್ವೀಟ್ಸ್ ಮಾಲೀಕ, ಗೋಕಾಕ
| ಅಕ್ಕಪ್ಪ ಮಗದುಮ್ಮ ಬೆಳಗಾವಿ