ಎರಡೇ ದಿನದಲ್ಲಿ ದಿನಸಿ ಸಾಮಾಗ್ರಿ ಖಾಲಿಯಾಗುವ ಭೀತಿ

rice
Published on

ವೇಣುವಿನೋದ್ ಕೆ.ಎಸ್

ಮಂಗಳೂರು: ಕರೊನಾ ಕಾರಣದಿಂದಾಗಿ ದಿನಸಿ ಅಂಗಡಿ ಮುಚ್ಚಬಾರದು ತೆರೆಯಬೇಕು ಎಂಬ ಒತ್ತಡದ ನಡುವೆ ಜಿಲ್ಲಾಡಳಿತ ಏಪ್ರಿಲ್ 1ರಿಂದ ಪ್ರತಿ ದಿನ ಬೆಳಗ್ಗೆ ನಿಗದಿತ ಅವಧಿಯಲ್ಲಿ ಅಂಗಡಿ ತೆರೆಯುವುದಕ್ಕೆ ಅನುಮತಿಯೇನೋ ನೀಡಿದೆ.

ಆದರೆ ಅಂಗಡಿಯವರಿಗೆ ಬೇಕಾದ ವಸ್ತುಗಳು ಬರುವುದಾದರೂ ಎಲ್ಲಿಂದ? ಚಿಲ್ಲರೆ ಅಂಗಡಿಯವರಿಗೆ ಸಾಮಾಗ್ರಿ ನೀಡುವವರು ರಖಂ ವ್ಯಾಪಾರಸ್ಥರು. ನಿರಂತರವಾಗಿ ಜನರಿಗೆ ಖರೀದಿಗೆ ಅವಕಾಶ ಕೊಟ್ಟರೆ ಇನ್ನೆರಡೇ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಗಟು ವ್ಯಾಪಾರಸ್ಥರಲ್ಲಿರುವ ಎಲ್ಲಾ ದಿನಸಿ ಸಾಮಗ್ರಿ ದಾಸ್ತಾನು ಖಾಲಿಯಾಗಲಿದೆ ಎನ್ನುವ ಆತಂಕದ ಮಾಹಿತಿ ಇದೀಗ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಬೇಕಾದ ಆಹಾರವಸ್ತು ಸಂಪೂರ್ಣ ಹೊರ ಜಿಲ್ಲೆಗಳಿಂದಲೇ ಬರಬೇಕು. ಇಲ್ಲಿ ಬೆಳೆಯುವ ಅತ್ಯಲ್ಪ ಸಾಮಾಗ್ರಿ ಬೆಳೆಯುವವರ ವೈಯಕ್ತಿಕಕ್ಕೆ ಖರ್ಚಾಗುತ್ತದೆ. ಇಲ್ಲಿ ಪೂರ್ತಿ ದಿಗ್ಬಂಧನ ಹೇರಿರುವುದರಿಂದಾಗಿ ಯಾವುದೇ ದಿನಸಿ ಸಾಗಾಟದ ಲಾರಿ, ಟ್ರಕ್ ಸಿಬ್ಬಂದಿ ಈ ಭಾಗಕ್ಕೆ ಬರುವ ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಬಂದರೆ ಊಟ, ತಿಂಡಿ ಸಿಗುವುದಿಲ್ಲ, ಲಾರಿ ಕೆಟ್ಟರೆ ಮೆಕ್ಯಾನಿಕ್‌ಗಳಿಲ್ಲ, ಟೈರ್ ಅಂಗಡಿಗಳಿಲ್ಲ ಈ ಎಲ್ಲ ಕಾರಣದಿಂದಾಗಿ ಬರಲು ಕೇಳುತ್ತಿಲ್ಲ ಎನ್ನುವುದು ಸಗಟು ವ್ಯಾಪಾರಸ್ಥರ ಸಂಘದವರು ಹೇಳುವ ಮಾತು.

ಒಂದು ವೇಳೆ ಕೆಲವೇ ಬೆರಳೆಣಿಕೆ ಮಂದಿ ಬರಲು ಒಪ್ಪಿದರೂ ಅವರು ದುಪ್ಪಟ್ಟು ದರ ಕೇಳುತ್ತಾರೆ, ಉದಾಹರಣೆಗೆ ಗುಲ್ಬರ್ಗದಿಂದ ದಿನಸಿ ಸಾಗಾಟ ಲಾರಿಯವರು ಮೊದಲು 2100 ರೂ.ಗೆ ಸಾಗಾಟ ಮಾಡುತ್ತಿದ್ದವರು ಈಗ 4000 ರೂ. ಕೇಳುತ್ತಾರೆ ಎನ್ನುತ್ತಾರೆ ಸಂಘದ ಮಾಜಿ ಅಧ್ಯಕ್ಷ ಜಿ.ಜಿ.ಮೋಹನ್‌ದಾಸ್ ಪ್ರಭು.

ಹುಬ್ಬಳ್ಳಿ, ಗದಗ ಮುಂತಾದೆಡೆ ಕೂಡಾ ಕಟ್ಟುನಿಟ್ಟಿನ ಕ್ರಮ ವಹಿಸಿರುವುದರಿಂದ ಅಲ್ಲೂ ಮಾರ್ಕೆಟ್ ತೆರೆಯುತ್ತಿಲ್ಲ, ಹಾಗಾಗಿ ಸಾಮಾಗ್ರಿ ಪೂರೈಕೆ ಮಾಡುವುದೂ ಕಷ್ಟವಾಗಿರುವುದು ಮತ್ತೊಂದು ಕಂಟಕ.

ದ.ಕ ಜಿಲ್ಲೆಗೆ ಪ್ರಸ್ತುತ ಅಕ್ಕಿ ಗಂಗಾವತಿಯಿಂದ, ಗೋಧಿ ಹುಬ್ಬಳ್ಳಿ, ಬೆಂಗಳೂರು, ಕೋಲಾರ ಕಡೆಯಿಂದ ಬರುತ್ತಿದೆ, ಉಳಿದಂತೆ ಗದಗ, ಗುಲ್ಬರ್ಗ ಕಡೆಯಿಂದ ಹಲವಾರು ದಿನಸಿ ವಸ್ತುಗಳು ಆಗಮಿಸುತ್ತವೆ. ಮಂಗಳೂರು ಹಳೇಬಂದರಿನಲ್ಲಿ ಸುಮಾರು 250ರಷ್ಟು ರಖಂ ವ್ಯಾಪಾರಸ್ಥರು ಜಿಲ್ಲೆಯ ವಿವಿಧೆಡೆಗೆ ಆಹಾರವಸ್ತು ಪೂರೈಕೆ ಮಾಡುತ್ತಾರೆ.

ಜಿಲ್ಲಾಡಳಿತಕ್ಕಿದೆ ದೊಡ್ಡ ಹೊಣೆ: ಜಿಲ್ಲಾಡಳಿತ ಪ್ರತಿ ದಿನ ಜನರಿಗೆ ಖರೀದಿಗೆ ಅವಕಾಶ ಕೊಡಬೇಡಿ, ಬದಲು ಒಂದು ದಿನ ಆಹಾರ ಸಾಮಾಗ್ರಿ ತರಿಸಿ, ಲೋಡ್ ಮಾಡುವುದಕ್ಕೆ ಅವಕಾಶ ನೀಡಿ, ಮರುದಿನ ಅಂಗಡಿ ತೆರೆಯಲು ಬಿಡಿ, ಇದನ್ನು ಪರ್ಯಾಯ ದಿನಗಳಂದು ಮಾಡಬೇಕು. ಜಿಲ್ಲೆಗೆ ಸಾಮಗ್ರಿ ಪೂರೈಕೆಯಾಗುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಆಹಾರ ವಸ್ತು ಪೂರೈಕೆಗೆ ನೆರವಾಗುವಂತೆ ನೋಡಿಕೊಳ್ಳಬೇಕು. ಸಾಮಗ್ರಿ ತರುವ ಲಾರಿಗಳ ಸಿಬ್ಬಂದಿಗಳಿಗೆ ಮಾರ್ಕೆಟ್ ಬಳಿ ಊಟ, ತಿಂಡಿಗೆ ವ್ಯವಸ್ಥೆ ಮಾಡಿಕೊಡಬೇಕು.

ನಮ್ಮ ಹೋಲ್‌ಸೇಲರ್ಸ್ ಬಳಿ ಇರುವ ಎಲ್ಲಾ ದಿನಸಿ ಸ್ಟಾಕ್ ಖಾಲಿಯಾಗುತ್ತಾ ಬಂದಿದೆ, ಇನ್ನೆರಡು ದಿನ ಜನರಿಗೆ ಖರೀದಿಸಲು ಅವಕಾಶ ಕೊಟ್ಟರೆ ನಾಲ್ಕು ದಿನ ಬಳಿಕ ಊಟಕ್ಕೆ ಅಕ್ಕಿಯಿಲ್ಲದಾಗುವುದು ಖಂಡಿತ. ಸರ್ಕಾರ ಈ ಬಗ್ಗೆ ನಮಗೆ ವಸ್ತು ಬರಬೇಕಾದ ಕಡೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿ, ಈ ಭಾಗಕ್ಕೆ ವಸ್ತು ಪೂರೈಕೆಗೆ ಕ್ರಮ ವಹಿಸಬೇಕು. ಜಿ.ಜಿ.ಮೋಹನ್‌ದಾಸ್ ಪ್ರಭು, ಸಗಟು ವ್ಯಾಪಾರಸ್ಥರ ಸಂಘ ಮಾಜಿ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net